Monday, October 24, 2016

nedariTTu kELu bhaaratava

ನೆದರಿಟ್ಟು ಕೇಳು ಭಾರತವ 

ಅಮ್ಮನ ಬಾಯಿಂದ ಗುಮ್ಮನ ಕತೆ ಕೇಳಿ 
ಸುಮ್ಮ ಕೂಡದ ತುಂಟನೆ | ನೀ ಕೇಳು
ಹೊಮ್ಮಿ ಮೂಡಿಹುದು ಭಾರತವು | 1 |

ಅಗ್ಗಳದ ಕತೆಯಿದು ಹಿಗ್ಗಿ ಕೇಳೆಲೆ ಕಂದ 
ಕುಗ್ಗಿದ ಮನಸು ಅರಳುವುದು | ಅಮೃತದ
ಸುಗ್ಗಿ ಸಂಭ್ರಮವ ಹಾಡುವುದು | 2 |

ಜಂಬು ದ್ವೀಪವು ಎಂಬ ಇಂಬಾದ ಹೆಸರಿನ 
ನಂಬಿಕೆಯ ನಾಡು ಭಾರತ | ದೇಶಕೆ 
ಕೊಂಬು ಮೂಡಿಸಿದ ಕತೆಕೇಳು | 3 |

ವ್ಯಾಸ ಭಾರತವಿಂದು ದೇಶ ಗಡಿಯನು ದಾಟಿ 
ಸಾಸಿರ ಭಾಷೆ ನುಡಿಗಳಲಿ | ಅರಿವಿನ 
ಕೋಶವಾಗಿರುವ ಬಗೆ ನೋಡು | 4 |

ತಿಳಿಯಾದ ನುಡಿಯಲ್ಲಿ ಕಳೆಗೊಂಡು ಅರಳುತ್ತ 
ಸುಳಿತೆಗೆದು ಹಬ್ಬಿ ಹರದಿಹುದು | ಭಾರತವು 
ಇಳೆಯ ಅತಿದೊಡ್ಡ ಕಥನವು | 5 |

ನೂರಾರು ನುಡಿಗಳಲಿ ಮೇರು ನುಡಿ ಮಾತಿನಲಿ 
ಸಾರಿ ಹೇಳಿರುವ ಭಾರತದ | ಕತೆಯಿಲ್ಲಿ
ಸೂರೆಗೊಂಡಿಹುದು ತ್ರಿಪದಿಯಲಿ | 6 |

ಗೊತ್ತಿದ್ದ ಕತೆಯನ್ನೆ ಮತ್ತೆಬರೆಹೊರಟಿರುವೆ 
ಸತ್ತು ಹೋಗಿಲ್ಲ ಕೌರವ | ಪಾಂಡವರು  
ನಿತ್ಯ ಬದುಕಿಯರು ನಮ್ಮಲ್ಲಿ | 7 |

ಎಲ್ಲರೂ ಹೇಳಿದ ಬಲ್ಲವರು ಓದಿದ 
ಮಲ್ಲರ ಚರಿತೆ ಸಾರುತ್ತ | ಭಾರತಕೆ 
ಮೆಲ್ಲನೆ ಉಸಿರು ತುಂಬಿರುವೆ | 8 |

ನಾಡಿನಲಿ ಚಿಗುರೊಡೆದು ಕಾಡಿನಲಿ ಪಲ್ಲವಿಸಿ
ಹಾಡಾಗಿ ಹರಿವ ಭಾರತವು | ಜನಪದರ 
ನಾಡಿಮಿಡಿಯುವ ಕಾವ್ಯವು | 9 |

ಅರಮನೆಯಲಿ ಹುಟ್ಟಿ ಗುರುಮನೆಯಲಿ ಬೆಳೆದು 
ಸರುವ ಲೋಕದ ಕತೆಸಾರೊ | ಭಾರತಕೆ 
ಸರಿಸಮನಾದುದೇನಿಲ್ಲ | 10 |

ಹಿರಿಕತೆ ಭಾರತಕೆ ಸರಿದೊರೆ ಯಾವುದು 
ಗುರುವ್ಯಾಸ ಮುನಿಯು ರಚಿಸಿದ | ಕಾವ್ಯವನು 
ಹರಪುತ್ರ ಗಣಪ ಲಿಪಿಸಿರುವ | 11 |

ಬದುಕಿನ ಭಾವಗಳು ಹದಗೊಂಡು ಬೆಸುಗೆಯಲಿ 
ಚದುರ ಕಾವ್ಯವನೆ ಮೂಡಿಸಿ | ನಲಿದಾವು 
ನೆದರಿಟ್ಟು ಕೇಳೊ ಭಾರತವ | 12 |

ಮನಭಾವದಾಚೆಗಿನ ಘನವಾದ ವಿಷಯಗಳ 
ಅನುನಯದಿ ಇಲ್ಲಿ ಮೂಡಿಸಿದ | ಭಾರತವ 
ಗುಣವರಿತು ಓದಿ ಸವಿಯುವುದು | 13 |

ಬಿತ್ತರದ ಕತೆಯನ್ನು ಒತ್ತಾಗಿ ಪೋಣಿಸಿ 
ಚಿತ್ತ ಭಾವವನೆ ತಟ್ಟುವ | ತೆರದಲ್ಲಿ 
ಕೆತ್ತಿಸಿದ ಚೇತನಕೊಂದಿಸುವೆ | 14 |

ಕತೆಯ ಹೂರಣವಿಲ್ಲಿ ಜತನ ಮಾಡಿಹೆನೆಂಬ 
ಅತಿಯಾದ ಮಾತು ಹೇಳಲು | ಹೊರಟಿಲ್ಲ 
ಮತಿವಂತ ನೀನೆ ವರೆಗಚ್ಚು | 15 | 

ದೇಸಿಯ ಮೂಲದ ಸಾಸದ ಈ ಕತೆಯು 
ಸೋಸಿ ಕಾವ್ಯದ ರೂಪದಲಿ | ಕೊಟ್ಟಂತ 
ವ್ಯಾಸ ಗುರುವಿಗೆ ವಂದಿಸುವೆ | 16 |

ಹತ್ತಾರು ನಾಡಲ್ಲಿ ಸುತ್ತಾಡಿ ಸುಳಿಸಿರುವ 
ಗೊತ್ತುಗುರಿ ಮೀರಿ ಬೆಳೆದಿರುವ | ಭಾರತವು 
ಚಿತ್ತ ಕದಿಯುವುದು ಸುಳ್ಳಲ್ಲ | 17 |

ನೂರೆಂಟು ನದಿ ಸೇರಿ ಮೇರು ಸಾಗರವಾಗಿ 
ಭಾರತದ ಕತೆಯು ಹಬ್ಬಿಹುದು | ಜನಮನವ 
ಸೂರೆಗೊಂಡಿಹುದು ಅನುಗಾಲ | 18 |





Sent from http://bit.ly/hsR0cS

No comments: