Sunday, September 6, 2009

ನೆನಪಿನ ಬುತ್ತಿ ೧

ಎಂದಿನಿಂದಲೋ ಬರೆಯಬೇಕೆಂದುಕೊಂಡಿದ್ದ ಬಾಲ್ಯದ ನೆನಪುಗಳನ್ನು ಇಂದು ಎಕೋ ಕೆದಕಿ ಬರೆಯ ಬೇಕೆನಿಸಿದೆ.
ಆದರೆ ಎಲ್ಲಿಂದ ಪ್ರಾರಂಭಿಸುವುದು , ಹೇಗೆ ಪ್ರಾರಂಭಿಸುವುದು ಎಂಬುದೇ ಸಮಸ್ಯೆ.ಹಿಂದೆಯೂ ಈ ಸಮಸ್ಯೆ ಎದುರಾದದ್ದರಿಂದಲೇ ಬರೆಯುವುದನ್ನು ಮುಂದೂಡುತ್ತ ಬಂದಿದ್ದೆ. ಈಗಲೂ ಎಷ್ಟರಮಟ್ಟಿಗೆ ಆ ನೆನಪುಗಳನ್ನು ಇಲ್ಲಿ ದಾಖಲಿಸುವುದು ಸಾಧ್ಯವೋ..... ಗೊತ್ತಿಲ್ಲ !
ಬಹುಶಃ ಬಾಲ್ಯದೊಂದಿಗೆ ಮುಖಾಮುಖಿಯಾಗುವುದು ಕಷ್ಟದ ಕೆಲಸ !


ಮೊದಲು ಅವ್ವನ ಕುರಿತು , ಹಡದವ್ವನ ಕುರಿತು ಬರೆಯಬೇಕು. ಅವ್ವ ಎನ್ನುವ ಶಬ್ದದ ಬಗ್ಗೆಯೇ ನನಗೆ ತೀವ್ರ ಕುತೂಹಲ ! ನನ್ನ ಓರಿಗೆಯವರೆಲ್ಲ ಅವ್ವ ಅವ್ವ ಎಂದು ತಮ್ಮ ಅವ್ವಂದಿರನ್ನು ಕರೆಯುವಾಗ ನನಗೆ ಹಾಗನ್ನಿಸಿರಬೇಕು. ಏಕೆಂದರೆ ನಾನು ಮನೆಗೆ ಹೋದಾಗ ಕರೆಯುವುದು ಅಮ್ಮ ಎಂದೇ ಹೊರತು ಅವ್ವ ಎಂದಲ್ಲ. ಅಮ್ಮ ಎಂದರೆ ನನ್ನನ್ನು ಜೋಪಾನಮಾಡಿದ ನನ್ನ ತಾಯಿಯ ಮಲತಾಯಿ. ನಾನು ಅವ್ವ ಎಂದು ಕರೆಯುತ್ತಿದ್ದದ್ದು ಒಂದಿಬ್ಬರಿಗೆ ಮಾತ್ರ , ಅದೂ ಅವರ ಹೆಸರಿನೊಂದಿಗೆ ಅವ್ವ ಪದ ಸೇರಿಸುತ್ತಿದ್ದೆ.


ಸಂಗವ್ವವ್ವ,ಕಲ್ಲವ್ವವ್ವ ಎಂದು. ಅವರು ನನ್ನ ತಂದೆಯ ಮೊದಲ ಹೆಂಡತಿಯ ಅಕ್ಕ ತಂಗಿಯರು. ನನ್ನ ಅಪ್ಪ ನನ್ನ ಅವ್ವನಿಗಿಂತ ಮೊದಲು ಮತ್ತೊಬ್ಬಳನ್ನು ಮದುವೆಯಾಗಿದ್ದ ಎಂಬುದು ಗೊತ್ತಾದದ್ದು ತೀರ ಇತ್ತೀಚೆಗೆ-ಅಂದರೆ ನಾನು ಪದವಿ ಹಂತಕ್ಕೆ ಬಂದಾಗ. ಅವರನ್ನು ಹಾಗೆ ಸಂಗವ್ವವ್ವ ... ಎಂದು ಕರೆಯುವುದು ನನಗೆ ಮುದ ನೀಡುತ್ತಿತ್ತು. ಅವರೂ ಸಹ ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಹೇಗೂ ನಾನು ಅವರ ತಂಗಿಯ ಗಂಡನ ಚಿಕ್ಕ ಮಗನಾದ್ದರಿಂದ, ಅದೂ ತಾಯಿಯನ್ನು ಕಳೆದುಕೊಂಡ ಪರದೇಶಿ ಮಗನಾದ್ದರಿಂದ.


ನನ್ನ ಅಣ್ಣ ಈ ತಾಯಿಯಿಲ್ಲದ ಕೊರತೆಯನ್ನು ತುಂಬಿಕೊಳ್ಳುವದಕ್ಕೊ ಅಥವಾ ನಮ್ಮ ಚಿಗವ್ವ ಮತ್ತು ಮಾವನನ್ನು ಅನುಸರಿಸಿಯೊ ನಮ್ಮ ತಾಯಿಯ ತಾಯಿಗೆ (ಬಾಯಮ್ಮನಿಗೆ)ಅವ್ವ ಎಂದೇ ಕರೆಯುತ್ತಿದ್ದನು.ನಾವು ನಾಲ್ಕೂಜನ ( ಅಣ್ಣ ,ಆಕ್ಕಂದಿರು ಮತ್ತು ನಾನು) ನಮ್ಮ ಅಪ್ಪನನ್ನು ದೊಡ್ಡಮಾವ ಎಂದೇ ಕರೆಯುತ್ತಿದ್ದೆವು-ಚಿಗವ್ವ ಮತ್ತು ಮಾವನ್ಅನ್ನು ಅನುಸರಿಸಿ.

`

ಅವ್ವ' `ಅಪ್ಪ' ಎಂದು ಕರೆಯುವ ಅವಕಾಶದಿಂದ ನಾವೆಲ್ಲರೂವಂಚಿತರಾಗಿದ್ದೆವು. ನಾನು ಅಪ್ಪ ಎಂದು ಕರೆಯಲು ಪ್ರಾರಂಭಿಸಿದ್ದು ಪದವಿ ತರಗತಿಗೆ ಬಂದಮೇಲೆ ಅದೂ ಗೆಳೆಯರ ಮುಂದೆ ಏನಾದರೂ ತಂದೆಯ ಬಗೆಗೆ ಹೇಳುವುದು ಬಂದಾಗ.ನಾನು ನನ್ನ ಅವ್ವನನ್ನು ಅವ್ವ ಎಂದು ಕರೆದದ್ದು ಇಲ್ಲವೇ ಇಲ್ಲ. ಏಕೆಂದರೆ ನನ್ನ ಅವ್ವ ತೀರಿಕೊಂಡದ್ದು ನನಗಿನ್ನೂ ಎರಡು ವರ್ಷ ತುಂಬುವ ಮುಂಚೆ, ನನ್ನ ತಮ್ಮನನ್ನು ಹಡೆದ ಎಂಟು ಹತ್ತು ದಿನಗಳಲ್ಲಿಯೇ.ಹೀಗೆಂದು ನಮ್ಮ ಅಮ್ಮ ಯಾರದಾದರೂ ಮುಂದೆ ಹೇಳುವಾಗ ಕೇಳಿಸಿಕೊಂಡದ್ದು. ಆದರೂ ಅವ್ವ ನನ್ನ ನೆನೆಪಿನಿಂದ ಮಾಸಿಲ್ಲ.
ಅವ್ವನ ಕುರಿತು ನನಗೆ ನೆನಪಿದ್ದ ಸಂಗತಿಗಳು ಎರಡೇ ಎರಡು ಮಾತ್ರ.


ಒಂದು : ಅಮ್ಮ ,ಗಂಗಕ್ಕ , ಕಲ್ಲಕ್ಕ (ನಮ್ಮ ಚಿಕ್ಕಮ್ಮರನ್ನು ಕರೆಯುತ್ತಿದ್ದದ್ದು ಹೀಗೆ) ಮತ್ತು ಅವ್ವ ಎಲ್ಲರೂ ಸೇರಿ ದನದ ಮನೆಯ ತಲಬಾಗಿಲ ಹೊಸ್ತಿಲ ಹತ್ತಿರ ಕೂತು ಸಂಡಿಗೆ ಮಾಡುತ್ತಿದ್ದರು. ಬಾಗಿಲ ಹೊರಗೆ ನಿಗಿ ನಿಗಿ ಕೆಂಡದಂತಹ ಬಿಸಿಲು. ಬಿಸಿಲಲ್ಲಿ ಹಾಕಿದ ಹೊರಸಿನ ಮೇಲೆ ಸಂಡಿಗೆಯನ್ನು ಒಣಗಿಸಲು ಇಟ್ಟಿದ್ದರು. ಮಕ್ಕಳಾದ ನಾವೆಲ್ಲ ಸಂಡಿಗೆ ಹಿಟ್ಟನ್ನು ತಿನ್ನುತ್ತಲೇ ಇದ್ದೆವು. ನಾನಂತೂ ಹಿಟ್ಟಿನ ಡಬರಿಯ ಹತ್ತಿರ ಕೂತು ಹಿರೇತನ ಮಾಡುತ್ತಿದ್ದೆ. ಅಷ್ಟೊತ್ತಿಗೆ ಅವ್ವ ವಾಂತಿಮಾಡಿಕೊಂಡಳು. ಎಲ್ಲರಿಗೂ ಗಡಿಬಿಡಿಯಾಯಿತು. ಅವಳೂ ಹೆಚ್ಚು ಸಂಡಿಗೆ ಹಿಟ್ಟು ತಿಂದು ಹೊಟ್ಟಿ ಕೆಟ್ಟಿರಬೇಕೆಂದು ನಾನು ತಿಳಿದಿದ್ದೆ. ಆದರೆ ಮುಂದೇನಾಯಿತೊ ಗೊತ್ತಿಲ್ಲ ಅವ್ವ ಸತ್ತದ್ದದ್ದಷ್ಟೆ ನೆನಪು. ಅವಳು ಸತ್ತದ್ದು ಹೊಸಮನೆಯಲ್ಲಿ ಎಂಬುದು ಮಾತ್ರ ಸ್ಪಷ್ಟ ನೆನಪಿದೆ. ಹನಮಂತ ದೇವರ ಗುಡಿಯ ಹತ್ತಿರವಿರುವ ಈ ಮನೆಯಲ್ಲಿ ದನ ಕಟ್ಟಲು ಜಾಗವಿಲ್ಲ . ಈ ಮನೆಯ ಆವಾರದಲ್ಲಿ ಅಜ್ಜ ಕುಳಿತಿದ್ದ. ಪಟಗ ಸುತ್ತಿದ ಅಜ್ಜನ ಹತ್ತಿರ ನಾನು ಹೋಗಿ ಕುಳಿತದ್ದು ನೆನಪಿದೆ.


ಅವ್ವ ಸತ್ತ ಕೆಲವೇ ದಿನಗಳಲ್ಲಿ ತಮ್ಮ ಸತ್ತ .ಅವನು ಎಂಟಹತ್ತು ದಿನದವ. ನನ್ನ ಮೇಲೆ ಅವನನ್ನು ಹಡೆದಾಗಲೇ ನನ್ನ ಅವ್ವ ಸತ್ತದ್ದು. ಅವನ ಹೆಣವನ್ನು ಹಿತ್ತಲಲ್ಲಿ ಹುಗಿಯಲು ಒಯ್ಯುತ್ತಿದ್ದಾಗ ನೋಡಿದ ಚಿತ್ರ ಇಂದಿಗೂ ಸ್ಪಷ್ಟವಾಗಿದೆ. ಕೈಯಲ್ಲಿ ಹಿಡಿದಿದ್ದರೊ ಮರದಲ್ಲಿ ಹಿಡಿದಿದ್ದರೊ ಗೊತ್ತಿಲ್ಲ. ಅಂತೂ ಅವನ ಹೆಣವನ್ನು ಒಯ್ಯುವಾಗ ನಾಲ್ಕಾರು ಮಕ್ಕಳ ಜೊತೆ ಸಣ್ಣ ರುದ್ರಗೌಡನ ಅಂಗಡಿ ಖೋಲಿಯ ಕಿಡಕಿಯಲ್ಲಿ ಇಣುಕಿ ಹಾಕಿ ನೋಡಿದೆ. ಅಜ್ಜನ ಜೊತೆಗೆ ಯಾರೊ ಇಬ್ಬರಿದ್ದರು. ಒಬ್ಬ ಸಿದ್ಧನಗೌಡ ಮಾವ ಇರಬಹುದು. ಸಣ್ಣ ರುದ್ರಗೌಡ ಎಂದರೆ ನಮ್ಮಪ್ಪನ ಮೊದಲ ಹೆಂಡತಿಯ ಅಣ್ಣ. (ಅವನ ಬಗ್ಗೆಯೂ ಬರೆಯುವದಿದೆ. ನನ್ನ ಜೀವನ ವಿಕಾಸದಲ್ಲಿ ಅವನ ಪಾತ್ರವೂ ಬಹಳ ಮುಖ್ಯವಾದದ್ದು. ನನ್ನ ಬಾಲ್ಯದಲ್ಲಿ ಗಾಢ ಪ್ರಭಾವ ಬೀರಿದವರಲ್ಲಿ ಇವನೂ ಒಬ್ಬ.)``ಸಣ್ಣ ಹುಡುಗರು ಒಳಗೆ ಹೋಗ್ರಿ. ಒಳಗ ಹೋಗ್ರಿ''ಎಂದು ನೆರಳು ಬೀಳಬಾರದು ಎಂದು ಹೆದರಿಸಿದರು. ನನ್ನ ತಮ್ಮನಿಗೆ ಕಟ್ಟಿದ ಕುಂಚಿಗೆಯನ್ನು ನೋಡಿದ್ದೆ. ಸಣ್ಣ ರುದ್ರಗೌಡನ ಹೆಂಡತಿ ಶಾಂತವ್ವತ್ತಿ ನನಗೆ ಏನೋ ತಿನಿಸು ಕೊಟ್ಟಂತೆ ನೆನಪು. ಹಿತ್ತಲಲ್ಲಿ ಗ್ವಾಯಿನ ಮರದ ಹತ್ತಿರ ಹುಗಿದಿದ್ದನ್ನು ನೋಡಿದ ನೆನಪು ಇದೆ.



ಹಿತ್ತಲಲ್ಲಿ ನನ್ನ ತಮ್ಮನನ್ನು ಹುಗಿದ ಜಾಗದ ಸಮೀಪವೇ ನನ್ನ ಚಿಗವ್ವನ ಮಗನನ್ನು ಮತ್ತು ನನ್ನ ಅಕ್ಕ ಶಾಂತಕ್ಕನ ಮಗನನ್ನು( ೫-೬ ದಿನದ ಕೂಸು)ಹುಗಿದಿದ್ದರಿಂದ ಆ ಜಾಗ ಈಗಲೂ ಸ್ಮರಣೆಯ ಕೇಂದ್ರವಾಗಿದೆ. ನನ್ನ ತಮ್ಮನಿಗೆ ಕಟ್ಟಿದ ಕುಂಚಿಗೆ ನೆನಪುಳಿಯಲು ಕಾರಣ ಹಿತ್ತಲ ಹತ್ತಿರ ಹಾಕಿರುತ್ತಿದ್ದ ಅರಿವೆಗಳು.ಮಕ್ಕಳಿಗೆ ಮುಟ್ಟದೋಷವಾದಾಗ ಸಮೀಪದ ಸೊಟಾಕನಾಳಕ್ಕೆ ಮುರುವು ಹಾಕಿಸಲು ಹೋಗುವಾಗ ಮಕ್ಕಳ ಮೈಮೇಲಿನ ಬಟ್ಟೆಗಳನ್ನು ದಾರಿ ಬದಿಯ ಕಂಟಿಗೆ ಈಗಲೂ ಹಾಕಿರುತ್ತಾರೆ. ಅದನ್ನು ಬಾಲ್ಯದಿಂದಲೂ ನೋಡುತ್ತ ಬಂದಿರುವೆ. ಹೀಗಾಗಿ ತಮ್ಮನ ಕುಂಚಿಗೆಯ ನೆನಪು ಸ್ಪಷ್ಟವಾಗಿದೆ.



ಎರಡನೆಯ ಸಂಗತಿ :

ಈ ಘಟನೆ ತೀರ ಚುಟುಕಾದುದು. ನಾನು ಯಾವುದೊ ಕಾರಣಕ್ಕೆ ಹಟ ಮಾಡುತ್ತಿದ್ದಾಗ ಅವ್ವ ನನ್ನನ್ನು ಹೊಡೆಯಲು ಬಂದಿದ್ದಳು. ಆಗ ಅವ್ವನ ಮುಖ ನೋಡಿದ ನೆನಪೇ ಇಲ್ಲ. ಈ ಸಂಗತಿಗೆ ಇನ್ನೊಂದು ಸಂಗತಿಯೂ ತಳಕು ಹಾಕಿಕೊಂಡಿದೆ. ಇನ್ನೊಮ್ಮೆ ನಾನು ಮತ್ತು ಬಸನಗೌಡ (ನಮ್ಮ ಸೋದರ ಮಾವನ ಮಗ) ಕೂಡಿ ಆಡುವಾಗ ಹಟಮಾಡಿದ್ದಕ್ಕೆ ಅತ್ತೆಯೂ ಇದೇ ರೀತಿ ಬಯ್ದಿದ್ದಳು. ಅದೂ ಅದೇ ಪಡಸಾಲೆಯಲ್ಲಿ ನಿಂತು. ಅವ್ವ ಬಯ್ದ ಪ್ರಸಂಗ ನೆನಪಿಸಿಕೊಂಡಾಗ ಅತ್ತೆಯ ಪ್ರಸಂಗವೂ ನೆನಪಿಗೆ ಬರುತ್ತದೆ.

ಈ ಎರಡು ಸಂಗತಿಗಳನ್ನು ಬಿಟ್ಟರೆ ಅವ್ವನ ಬಗೆಗೆ ಹೆಚ್ಚೇನೂ ಗೊತ್ತಿಲ್ಲ. ಅಮ್ಮ , ಚಿಗವ್ವ, ಶಂಕರಮ್ಮ , ಚೆನ್ನಮ್ಮ ಇವರೆಲ್ಲರೂ ಹೇಳಿದ ಸಂಗತಿಗಳ ಆಧಾರದ ಮೇಲೆಯೇ ಅವ್ವನ ವ್ಯಕ್ತಿತ್ವವನ್ನು ಕಲ್ಪಿಸಿಕೊಂಡಿರುವೆ. (ಅಮ್ಮ ನನ್ನನ್ನು (ನಮ್ಮೆಲ್ಲರನ್ನು) ಜೋಪಾನ ಮಾಡಿದ ಸಂಗತಿಯನ್ನು ನಮ್ಮೂರವರು (ಕಡದಳ್ಳಿ)ಮತ್ತು ಬನಹಟ್ಟಿ ,ಅಮರಗೋಳದವರು ಬಣ್ಣಿಸಿ ಹೇಳುವಾಗ ಅಮ್ಮನ ಬಗೆಗೆ ಗೌರವ ಹುಟ್ಟುತ್ತಿತ್ತು.) ಅವ್ವ ಸಾಧಾರಣ ಗೌರವರ್ಣದ , ದುಂಡು ಮೊಗದ ಎತ್ತರವೂ ಅಲ್ಲದ ತೀರ ಗಿಡ್ಡವೂ ಅಲ್ಲದ ಸಾಮಾನ್ಯ ಎತ್ತರದ ದೇಹದವಳು. ಹೆಚ್ಚೂ ಕಡಿಮೆ ನನ್ನ ದೊಡ್ಡ ಅಕ್ಕ ಶಾಂತಕ್ಕಅವ್ವನನ್ನೇ ಹೋಲುವಳಂತೆ. ಆಶ್ಚರ್ಯದ ಸಂಗತಿ ಯೆಂದರೆ ಅವ್ವನ ಒಂದೂ ಭಾವಚಿತ್ರ ಇಲ್ಲ. (ನನ್ನ ಅಪ್ಪನದೂ ಇಲ್ಲ. ಅಪ್ಪ ಇತ್ತೀಚೆಗೆ ತೀರಿಕೊಂಡರೂ ೧೯೭೬ರಲ್ಲಿ ಅವರ ಭಾವಚಿತ್ರವೂ ಇಲ್ಲ . ಒಂದೇ ಒಂದು ಇತ್ತು. ಎತ್ತುಗಳನ್ನು ಹಿಡಿದುಕೊಂಡು ನಿಂತದ್ದು. ಈಗ ಅದೂ ಇಲ್ಲ. )

ಈವರೆಗೆ ಅವ್ವನ ಬಗೆಗೆ ಹೇಳಿದೆನೇ ಹೊರತು ಅವ್ವನ ಹೆಸರನ್ನು ಹೇಳಿಲ್ಲ. ಅವ್ವನ ಹೆಸರು `ಅಮೃತವ್ವ'ಅವ್ವನ ಹೆಸರಿನಲ್ಲಿ ಸಂಜೀವಿನಿ ಶಕ್ತಿ ಇದೆ. ಅಮೃತತ್ವವೂ ಇದೆ. ಅಮೃತವ್ವ ಮೃತಳಾಗಿದ್ದಾಳೆ. ನನಗೆ ತಾಯಿಯ ಯಾವ ಭಾಗ್ಯವನ್ನೂ ಕೊಡದೆ! ಪ್ರೌಢ ಶಾಲೆಯಲ್ಲಿ ಓದುವಾಗ ಹಿಂದಿ ಪಾಠದಲ್ಲಿ ಪಾಪಕ್ ಎಂಬ ಪಾತ್ರ ಇತ್ತು. ಹೆಸರಿನಲ್ಲಿ ಏನಿಲ್ಲ ಎಂಬ ಸಂದೇಶ ಸಾರುತ್ತಿತ್ತು. ಅದರಂತೆ ನನ್ನ ಅವ್ವನ ಹೆಸರನ್ನು ಅರ್ಥೈಸಲು ಸಾಧ್ಯವೇ ಆಗುವುದಿಲ್ಲ, ನನಗೆ.

2 comments:

Basu said...

hello sir, am Dr. B.L.Patil native of Sotaknal and presently doing my PG in SDM college of Ayurveda, hassan. it was a pleasure reading ur blog as i too wandered in the same places(mentioned in blog)in my childhood. i coluld cherish all the sweet moments of my childhood. thanx for reminding my childhood. i am eagerly waiting for more blogs from u sir.

ಚಿಲಿಪಿಲಿ said...

ಡಾ. ಬಸು ೩ ವರ್ಷದ ಅನಂತರ ಮತ್ತೆ ನನ್ನ ಬ್ಲಾಗ್ ಮುಂದುವರೆಸಿರುವೆ. ಆಗ ಓದಿ.
ನಿಮ್ಮ ತಂದೆ ಮತ್ತು ನಾನು ಕೂಡಿಯೇ ಓದಿರುವೆವು.