Thursday, May 28, 2020

ಬೆರೆಸಲು ತಣ್ಣೀರ್ ಎಲ್ಲಿ - ೮

ಬೆರೆಸಲು ತಣ್ಣೀರ್ ಎಲ್ಲಿ !

ಅಭಿನವ ಪಂಪ ಕವಿಯು ಬರೆದ
ರಾಮಚಂದ್ರ ಚರಿತ !
ಹೃದಯ ತೆರೆದು ಓದಲು ಸಾಕು
ಅರಿವೆವು ಕಾವ್ಯದದ್ಭುತ !

ಚಳನಯನದ ಸೀತೆಯ ಚಲುವಿಗೆ 
ಲಂಕೆಯ ರಾವಣ ಸೋತ !
ಕಮಲ ದಳದ ನೀರ್ ಹನಿಯಂತೆ
ಚಂಚಲವಾಯಿತು ಚಿತ್ತ !

ಸಾಗರ ಜಲವೆ ಬಿಸಿಬಿಸಿಯಾದರೆ
ಬೆರೆಸಲು ತಣ್ಣೀರ್ ಎಲ್ಲಿ !
ದಾರಿ ತಪ್ಪಿದ ರಾಜಗೆ ಬುದ್ಧಿಯ
ಹೇಳುವರಾರು ಅಲ್ಲಿ !

ಕದಡಿದ ನೀರು ತಿಳಿಯಾಗುವುದು
ಪ್ರಕೃತಿ ಸಹಜ ಲೀಲೆ !
ರಾವಣ ಮನಸು ನಿರ್ಮಲವಾಯಿತು
ಕಾಲ ಮುಗಿದ ಮೇಲೆ !

ರಾಮನ ಗೆದ್ದು ಸೀತಾ ದೇವಿಯ
ಕಾಣಿಕೆ ಕೊಡಬೇಕೆಂದ !
ದೈವ ಲೀಲೆ ಸಮರದಿ ಸೋತು
ಮರಣದ ಗತಿಗೆ ಸಂದ !

***
೨೩-೦೫-೨೦೨೦

ಅಪ್ಪಟ ದೇಸಿಗ - ೧೬

ಅಪ್ಪಟ ದೇಸಿಗ

ಅಚ್ಚಗನ್ನಡ ದೇಸಿ ನುಡಿಯಲಿ
ಮೂಡಿಬಂದಿದೆ ಈ ಕಬ್ಬ !
ಅಪ್ಪಟ ದೇಸಿಗ ಆಂಡಯ್ಯನಿಗೆ
ಹೋಲಿಕೆಯಾಗರು ಮತ್ತೊಬ್ಬ !

ಕನ್ನಡ ರತ್ನದ ಕನ್ನಡಿಯಲ್ಲಿ
ನೋಡಿದರೇನು ಕುಂದುಂಟು !
ಏತಕೆ ಬೇಕು ತಾಯ್ನುಡಿ ಕಬ್ಬಕೆ
ಸಕ್ಕದ ನುಡಿಯ ಹುಸಿನಂಟು !

ಹಲವು ನಾಲಗೆ ಉಳ್ಳ ಶೇಷನು
ಬಣ್ಣಿಸಲಾರನು ಕರುನಾಡು !
ನಾಲಗೆ ಒಂದಿದೆ ವರ್ಣಿಸಲೆಂತು
ಪ್ರಕೃತಿ ರಮ್ಯ ಸಿರಿಬೀಡು !

ಪೂವಿನ ಪೊಳಲಿನ ನನೆಯೆಂಬರಸನು
ಯುದ್ಧಕೆ ನಡೆದ ಪಣಕಟ್ಟಿ !
ಚಂದ್ರನ ಜಟೆಯಲಿ ಧರಿಸಿದ ಶಿವನಿಗೆ
ಸೋಲಿಸಿಬಿಟ್ಟ ಜಗಜಟ್ಟಿ !

ಸೊಬಗಿನ ಸುಗ್ಗಿಯ ಅದ್ಭುತ ಕಬ್ಬದ
ಶ್ವಾಸದ ಉಸಿರೆ ಕನ್ನಡವು !
ಹೊಸಯುಗದಲ್ಲು ಪಸರಿಸಲೆಲ್ಲೆಡೆ
ಕಸುವಿನ ಉಲಿಯ ಕನ್ನಡವು !

ಚಂದ್ರಗೌಡ ಕುಲಕರ್ಣಿ

ದೇಸಿ ನುಡಿಯ ಷಟ್ಪದಿ - ೧೫

ದೇಸಿ ನುಡಿಯ ಷಟ್ಪದಿ

ಸತ್ಯನುಡಿವ ಹರಿಶ್ಚಂದ್ರನ
ಕಾವ್ಯ ಕಟ್ಟಿದ ರಾಘವ !
ವಿಶ್ವಾಮಿತ್ರನ ಮನವ ಗೆದ್ದು
ಪಡೆದ ಉನ್ನತ ಗೌರವ !

ಹಿರಿಯ ಕಥನಕೆ ಮೊದಲು ಬಳಸಿದ
ದೇಸಿ ನುಡಿಯ ಷಟ್ಪದಿ !
ಕೇಳಿ ನಲಿವರ ಹಾಡಿ ಕುಣಿವರ
ಹೃದಯ ತಟ್ಟಿತು ತವನಿಧಿ !

ಕತೆಯ ಒಡಲಿಗೆ ಬೆಸುಗೆ ಹಾಕಿದ
ಮಾತು ಮಾತನು ಸೇರಿಸಿ !
ಹರುಷ ಪಟ್ಟನು ಹಂಪೆಯರಸಗೆ
ಕಾವ್ಯ ಕನ್ನಿಕೆ ಒಪ್ಪಿಸಿ !

ಶರಣ ಚರಿತೆಯ ರಚಿಸು ಎನ್ನುತ
ಕಟ್ಟು ಹಾಕಿದ ಹರಿಹರ !
ಸೋಮನಾಥ ಶರಭ ಚರಿತೆಯ
ಹೊನಲು ಹರಿಯಿತು ಸರಸರ !

ಸೊನ್ನಲಾಪುರ ಯೋಗಿವರ್ಯ
ಸಿದ್ಧರಾಮನ ಕಥನದಿ !
ಶರಣ ತತ್ವವು ಹರಳು ಗಟ್ಟಿದೆ
ವಚನ ಸೌರಭ ಮಥನದಿ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦
ಸಂಜೆ ೮-೩೮

ಹರಿಹರ - ೧೪

ಹರಿಹರ

ಮನುಜರ ಮೇಲೆ ಸಾವರ ಮೇಲೆ
ಕಾವ್ಯ ಬರೆಯದ ಧೀಮಂತ !
ಚಂದ್ರಧರನಿಗೆ ನಾಲಿಗೆ ಮಾರಿದ
ಭಕ್ತಾಗ್ರೇಸರ ಗುಣವಂತ !

ಬಡವರ ಮನೆಯ ತೊತ್ತಾಗಿದ್ದ
ರಗಳೆಗೆ ಕಟ್ಟಿದ ಹಿರಿಪಟ್ಟ !
ಶರಣ ಚರಿತೆಯ ಸುಂದರ ಕಥನವ
ದೇಸಿ ನುಡಿಯಲಿ ಹರಿಬಿಟ್ಟ !

ದುಂಬಿ ಎರಗದ ಗಾಳಿ ಅಲುಗದ
ಮೀಸಲು ಹೂಗಳು ದಿನನಿತ್ಯ !
ಹಂಪೆ ಅರಸಗೆ ಏರಿಸುತಿದ್ದ
ಮೌನದಿ ಮಾತನು ಆಡುತ್ತ !

ಬೇಡ ಕಣ್ಣಪ್ಪ ಅಕ್ಕ ನಂಬಿಗೆ
ಬಸವರಾಜನೆ ಮಾಣಿಕ್ಯ !
ಪ್ರೌಢ ಕಾವ್ಯ ಚಂಪು ಕೃತಿಯಲಿ
ಗಿರಿಜೆಯ ಪಾತ್ರದ ಸಾರ್ಥಕ್ಯ !

ರಗಳೆ ಚಂಪು ಶತಕವ ರಚಿಸಿದ
ಶರಣ ಸಂಸ್ಕೃತಿ ಹರಿಕಾರ !
ಷಟ್ಪದಿ ಜನಕ ರಾಘವಾಂಕಗೆ
ನೀಡಿದ ವಾಙ್ಮಯ ಸಂಸ್ಕಾರ !

ಚಂದ್ರಗೌಡ ಕುಲಕರ್ಣಿ
೧೯-೦೫-೨೦೨೦


Wednesday, May 27, 2020

ಅನುಭಾವಿ ಅಕ್ಕ - ೧೩

ಅನುಭಾವಿ ಅಕ್ಕ

ಗೊರವನ ಕನಸನು ಕಂಡ ಯೋಗಿನಿ
ವಚನಕೆ ಹಸಿರು ತೋರಣವು !
ಸಾವು ಇಲ್ಲದ ಕೇಡು ಇಲ್ಲದ
ಅಮೃತ ಸುಧೆಯ ಹೂರಣವು !

ಬೆಟ್ಟದ ಮೃಗಕೂ ಸಮುದ್ರ ನೊರೆತೆರೆ-
ಗಂಜಲಾರದ ಸಾಧಕಿಯು !
ಪ್ರಭುವಿನ ಒಲುಮೆಯ ಗಳಿಸಿಕೊಂಡ
ಕದಳಿ ಬನದ ಶೋಧಕಿಯು !

ರಾಜ ಧರ್ಮಕೆ ಲೋಕ ನೀತಿಗೆ
ಶರಣ ದೀಕ್ಷೆಯ ಕೊಟ್ಟವಳು !
ವಿಷಯ ವಾಸನೆ ಹರಿದು ಹಾಕುತ
ಬಯಲ ಬಟ್ಟೆಯ ತೊಟ್ಟವಳು !

ಹಸಿವೆಗಾಗಿ ಭಿಕ್ಷೆಯ ಬೇಡುತ
ತೃಷೆಗೆ ಕೆರೆಜಲ ಕುಡಿದವಳು !
ಶಯನ ವಸತಿಗೆ ಹಾಳು ದೇಗುಲ
ಎನುತ ಆಶ್ರಯ ಪಡೆದವಳು !

ಹಂಸ ಗಿಳಿಗಳ ವನವನು ಸುತ್ತುತ
ಲೋಕವ ಅರಿತಳು ಮಾದೇವಿ !
ಬಸವ ಶರಣರ ಸಂಗದಿ ಬೆರೆಯುತ
ಎತ್ತರಕೇರಿದ ಅನುಭಾವಿ !

ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦

ಅಂತರಂಗದ ರತುನ - ೧೧

ಅಂತರಂಗದ ರತುನ

ಕಳುವನು ಮಾಡದ ಹುಸಿಯನು ನುಡಿಯದ
ಅಂತರಂಗದ ರತುನ !
ಕೇಡಿಲ್ಲದಂತೆ ಒಲಿದು ಹಾಡಿದ
ಲಿಂಗ ಮೆಚ್ಚುವ ವಚನ !

ಸದುವಿನಯದಲಿ ಸವಿನುಡಿಗಳಲಿ
ಕೂಡಲ ಸಂಗನ ಸ್ಮರಣ !
ನಡೆದು ನುಡಿದ ನುಡಿನುಡಿಗಳಲಿ
ಜಂಗಮ ತತ್ವದ ಸ್ಫುರಣ !

ವಚನ ನಾಮಕೆ ಅಮೃತ ತುಂಬಲು
ಪಾವನ ಕಮಲಚರಣ !
ನುಡಿಯ ಮುತ್ತಿನ ಹಾರವೆ ಆದುದು
ಮಾಣಿಕ ದೀಪ್ತಿಯ ರಚನ !

ಜಗಮುಗಿಲಗಲವು ಮಿಗೆಯುಗದಾಳವು
ಕರಸ್ಥಲ ಲಿಂಗದಿ ಲೀನ !
ದೇಹವೆ ದೇಗುಲ ಶರವೆ ಕಳಸವು
ಪಡೆಯಲು ದೇವನ ಕರುಣ !

ಶರಣರ ಸಂಗದಿ ಶಿವಪಥ ಗುರುಪಥ
ಮಾಮನೆ ಅಂತಃಕರುಣ !
ಅನುಭವ ಮಂಟಪ ಸೂಳ್ನುಡಿ ತೇಜವು
ಲೋಕಕೆ ಅಮೃತ ಪಾನ !

ಚಂದ್ರಗೌಡ ಕುಲಕರ್ಣಿ
೯೪೪೮೭೯೦೭೮೭

ಮಾತು ಜ್ಯೋತಿರ್ಲಿಂಗ - ೧೦

ಮಾತು ಜ್ಯೋತಿರ್ಲಿಂಗ

ಕೊಟ್ಟ ಕುದುರೆಯನೇರಿ ಪಳಗಿಸಿ
ಬಟ್ಟ ಬಯಲನೆ ಗಳಿಸಿದ !
ಮಾತು ಜ್ಯೋತಿರ್ಲಿಂಗವಾಗಿಸಿ
ಮನದ ಮೈಲಿಗೆ ಅಳಿಸಿದ !

ಕೋಗಿಲೆ ಹಾಡಿಗೆ ಬೆರಗನು ನೀಡಿತು 
ತಳಿತ ಚಿಗುರಿನ ಮಾಮರ !
ಬೆಟ್ಟ ನೆಲ್ಲಿಗೆ ಉಪ್ಪು ಬೆರೆಯಿತು
ಅಮಿತ ಸವಿರುಚಿ ಸಾಗರ !

ತನುವ ಏರಿಗೆ ಮನವ ಕಟ್ಟುತ
ಪರಮ ಜಲವನು ತುಂಬಿದ !
ಕಂಬ ಕರಗುವ ಹಂಸ ಹಾರುವ
ಜೀವದೊಗಟನು ಬಿಡಿಸಿದ !

 ತೋಟದಾಳದ ಬೇರು ಅಗಿಯಲು
ಮನವ ಗುದ್ದಲಿ ಮಾಡಿದ !
ಬೆಳಕು ಕತ್ತಲೆ ಆನೆ ಸಿಂಹದ
ಬೆಡಗು ಬಿಡಿಸಿ ತೋರಿದ !

ಶರಣ ಸಂಗನ ಬಸವ ಕಟ್ಟಿದ
ಶೂನ್ಯ ಪೀಠವ ಏರಿದ !
ಶಬ್ದ ಸೀಮೆಯ ದಾಟಿ ನಡೆಯುತ
ಗುಹೆಯ ಈಶನ  ಸೇರಿದ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦