Saturday, August 13, 2022

ಅಲ್ಲಮ ತ್ರಿಪದಿಗಳು

 ನಡೆದ ದಾರಿಯನೆಲ್ಲ ಬಿಡಲಾರ್ದೆ ಅಳುಕಿಸಿ

ನುಡಿ ಬೆಡಗಿನ್ಹಂಗ ದೂರಿರಿಸಿ ! ಕುರುಹನ್ನೆ

ಪುಡಿಯ ಮಾಡಿದನು ಪ್ರಭುದೇವ !೧!


ಅರಿವಿನಾಳವ ತೋರಿ ಬೆರಗು ವಿಸ್ಮಯ ಸಾರಿ

ಶರಣ ಅವಧೂತ ಪ್ರಜ್ಞೆಯನು ! ಮೀರಿದವ

ಪರಮ ಜಿಜ್ಜ್ಯೋತಿ ಅಲ್ಲಮನು !೨!


ಭ್ರಮಣೆ ಭಯ ದೂರಿರಿಸಿ ಸಮಚಿತ್ತ ಅಣಿಗೊಳಿಸಿ

ಶ್ರಮಣ ಧಾರೆಗಳ ಸತ್ವವನು ! ಹೀರಿದ

ಭ್ರಮರ ಬಂಡುಣಿಗ ಅಲ್ಲಮನು !೩!


ಶಬ್ದ ಸಂಕಲೆ ಮುರಿದು ಅಬ್ಧಿ ಪಾರವ ಹರಿದು

ಸಬ್ಧವಾಗಿರುವ ಕೊಂಡಿಗಳ ! ಕಳಚಿದನು

ಲಬ್ಧ ವಿಶೇಷ ಅಲ್ಲಮನು !೪!


ಯಾರ ಶಿಷ್ಯನೂ ಅಲ್ಲ ಯಾರ ಗುರುವೂ ಅಲ್ಲ

ಯಾರ ಮನೆಮಗನು ತಾನಲ್ಲ ! ಅಲ್ಲಮ

ಮೀರಿ ನಡೆದನು ಲೋಕವನು !೫!


ಗುರುವಿನ ಹಂಗಿಲ್ದೆ ದರುಶನದ ಸಂಗಿಲ್ದೆ

ಅರಿವಿನ ಹಾದಿ ಹಿಡಿದಂಥ ! ಅಲ್ಲಮಗೆ

ಚರಣವಾಗಿಹವು ಮೈಯಲ್ಲ !೬!


***


ಕಲ್ಪಿತದ ಸಂಕಟಕೆ ಎಲ್ಲಿ ಪರಿಹಾರಿಹುದು

ಸಲ್ಲದು ನಿಜದ ಉಪಚಾರ ! ಎನ್ನುತ್ತ

ಇಲ್ಲವಾಗಿಸಿ ಮನವನ್ನು !೭!


ಸುಮ್ಮನಿರಿ ಎಂದೆನಲು ಹೆಮ್ಮೆ ನುಡಿ ಬಳಸುವುದೆ

ಸುಮ್ಮನಿರಿಸುವುದು ಸುಲಭಲ್ಲ ! ಭಾಷೆಗಳ

ಗಮ್ಮನನು ಅಳಿಸಿ ಹಾಕದಲೆ !೮!


ಸಂಕೇತ ಕುರುಹುಗಳ ಬಿಂಕತನ ಕಳಿಬೇಕು

ಸುಂಕದ ಭಾರ ಇಳುಬೇಕು ! ಬಂಧನದ

ಸೋಂಕಳಿದು ನಿಜವ ತಿಳಿಬೇಕು !೯!


ಶಬ್ದ ಮುಗ್ಧದಿ ಬೆರೆತು ಸ್ತಬ್ಧವಾಗಲುಬೇಕು

ಅಬ್ಧಿ ನೀರೆಲ್ಲ ಲಯವಾಗಿ ! ವ್ಯೋಮದಲಿ

ಲಬ್ಧವಾಗುವುದ ಅರಿಬೇಕು !೧೦!


ಬೆಂಕಿಯೊಳಗಣ ಬಿಸಿಯು ಸೋಂಕುಜಲ ಬಿಸಿಗುಂಟೆ

ಮಂಕು ಮಾತಿನಲಿ ಬಣ್ಣಿಸಲು ! ಅನುಭಾವ್ದ

ಕಂಕಿ ಒಕ್ಕಲದಿ ಸಿಲುಕುವೆವು !೧೧!


ಪರಮ ಗುರು ಅಲ್ಲಮನ ನಿರಶನದ ಮಾರ್ಗವದು

ಮುರಿದು ಕಟ್ಟುವುದ ಕಲಿಸಿತು ! ಲೋಕದ

ಮರಣ ಗೆಲುವುದನ ಅರಿಸಿತು !೧೨!


***


ಸಿದ್ಧ ಸತ್ಯವನೊಡೆದು ಇದ್ದ ಕುರುಹನು ಕೆಡೆದು

ಬದ್ಧ ಪಂಥಗಳ ನಿರ್ವಾಣ ! ಮಾಡುವುದು

ಶುದ್ಧ ಮಾರ್ಗಿಯ ಲಕ್ಷಣವು !೧೩!


ಒಂದು ಎರಡೆಂಬುದನು ಸಂದಿಲದದ್ವೈತವನು

ಗೊಂದಲದ ಬಂಧ ಸೂತ್ರವನು ! ಹಿಡಿದೆಳೆದು

ಹಿಂದೆ ಸರಿಸಿದನು ಪ್ರಭುದೇವ !೧೪!


ಆಗಿದ್ದು ಸ್ಥಾವರವು ಆಗುವುದು ಜಂಗಮವು

ಸಾಗದ ಕಾಲ ತತ್ವಗಳ ! ಪುಡಿಮಾಡಿ

ಯೋಗಿಯಾಗುವುದೆ ನಿರಶನವು !೧೫!


ಕುರುಹು ಸೃಜಿಸಿದ ಅರುಹ ಹುರಿದು ಹಾಕಲು ಬೇಕು

ಮರುಳತನದದನು ಅಳಿಬೇಕು ! ಪ್ರತಿಮೆಯ

ಪರಮತನ ಸುಟ್ಟುಬಿಡಬೇಕು !೧೬!


ಸಾವಿನೆದುರಿಸಿ ನಿಲುವ ಭಾವ ದಗ್ಧತಾ ಕ್ರಿಯೆಯು

ಸ್ವಾವಲಂಬನೆಯ ನಿಜತತ್ವ ! ಅದನರಿತು

ಭಾವಿಸೊಡಗೂಡು ತಪ್ಪದಲೆ !೧೭!


ಆರೂಢ ಸಿದ್ಧರಲಿ ಬೇರೆ ಗುರುನಾಥರಲಿ

ಸೇರಿ ಅವಧೂತ ಸೂಫಿಗಳ ! ಸಂಗದಲಿ

ಚಾರುತರದಾಟ ಆಡಿಹನು !೧೮!


***


ಉಪದೇಶವಿಲ್ಲಿಲ್ಲ ಉಪಮಾನ ಮೊದಲಿಲ್ಲ

ತಾರ್ಕಿಕದ ತತ್ವದ್ಹಂಗಿಲ್ಲ ! ಭಾಷೆಯ

ಕೀಲಿ ಕೈಗಳಿಗೆ ನಿಲುಕಲ್ಲ !೧೯!


ಒಪ್ಪಿತದ ಹುಸಿನೆಲೆಯ ನೆಪ್ಪನ್ನೆ ಅಳುಕಿಸಿ

ದಪ್ಪನೆಯ ಚಿಪ್ಪು ಕರಗಿಸಿ ! ಬೆಡಗನ್ನು

ಅಪ್ಪಿಕೊಳ್ಳುವನು ಪ್ರಭುದೇವ !೨೦!


ಆಕರದ ಮಾದರಿಯ ಚೌಕಟ್ಟು ಇಲ್ಲಿಲ್ಲ

ಲೋಕದ ಹಂಗು ಮೊದಲಿಲ್ಲ ! ಅಲ್ಲಮನ

ತೂಕದ ನಡೆಯೆ ವಿಸ್ಮಯವು !೨೧!


ಪುಸ್ತಕದಿ ದೊರೆಯದು ಮಸ್ತಕದಿ ಉಳಿಯದು

ಶಿಸ್ತು ಕಟ್ಟಳೆಗೆ ಒಲಿಯದು ! ಅಲ್ಲಮನ

ಮಿಕ್ಕು ಮೀರಿದ ಮಾರ್ಗವು !೨೨!


ಇಲ್ಲದೇ ಏನೇನು ಎಲ್ಲವೂ ಆಗುವ

ಬಲ್ಲಿತವ ಅರಿತ ನಗೆಗೇಡಿ ! ಅಲ್ಲಮನ

ಸಲ್ಲಲಿತ ಮಾರ್ಗ ಬೆಡಗಿನದು !೨೩!


ಸುಳ್ಳು ಸಂರಚನೆಗಳ ಗೊಳ್ಳುಹೊಟ್ಟನು ತೂರಿ

ಬಳ್ಳದಲಿ ಅಡಗಿ ಕುಳಿತಿರುವ ! ಬಯಲನ್ನು

ಮೆಲ್ಲುವರು ಸತ್ಯ ಮಾರ್ಗಿಗಳು !೨೪!


***


ಎಲ್ಲ ದೂರಕೆ ಸರಿಸಿ ಇಲ್ಲವಾಗುವದರಿತು

ನಿಲ್ಲಲು ಬೇಕು ಬಯಲಿನ ! ನಟ್ಟ ನಡು

ಗೆಲ್ಲಲು ಬೇಕು ಬಂಧನವ !೨೫!


ಅರಿತವಗೆ ಮಾತಿಲ್ಲ ಬರಿಮಾತಿಗರಿವಿಲ್ಲ

ಪರಮ ಯಾನಕ್ಕೆ ಆದ್ಯಂತ ! ಮೊದಲಿಲ್ಲ

ಸರಳತೆ ನಡತೆ ಸುಲಭಲ್ಲ !೨೬!


ಹಸಿವು ಆದರೆ ಮುದ್ದಿ ಬಸಿರು ತುಂಬಲು ನಿದ್ದಿ

ಬೆಸೆಯದಿರಬೇಕು ಅದನಿದನು ! ಕಾಯಕಕೆ

ಕೆಸರು ಅಂಟಿಸದೆ ನಡಿಬೇಕು !೨೭!


ಇರುವೆಯ ತೆರದಲ್ಲಿ ಮರಹತ್ತಿ ಉಣಬಹುದು

ಗರಿಹಕ್ಕಿಯಾಗಿ ನೇರಫಲ ! ಮೆಲಬಹುದು

ಹಿರಿದು ಕಿರಿ ಎಂಬುದುಲ್ಲಿಲ್ಲ !೨೮!


ಧರುಮ ಎಂಬುದು ಹೂವು ಸರುವರಿಗೆ ದಕ್ಕುವುದು

ಪರಮ ಪಕೃತಿಯ ಕೊಡುಗೆಯು ! ಮರೆಯದು

ಅರಳಿ ನಗುವುದನು ಎಂದೆಂದು !೨೯!


ಗುರಿಯ ತೋರುವ ಗುರುವು ಬರಲಾರ ನಮ್ಮೊಡನೆ

ಇರಲಾರ ಕಟ್ಟ ಕಡೆತನಕ ! ಅವರವರೆ

ಸರಿದಾರಿ ಕಂಡು ನಡಿಬೇಕು !೩೦!


***


ತೋರು ಬೆರಳದು ಮಾತ್ರ ದಾರಿಯನು ತೋರದು

ಮೇರು ಗುರಿಯನ್ನು ತೋರುವುದು ! ಅದನರಿತು

ದಾರಿಯನು ಕಂಡುಕೊಳಬೇಕು !೩೧!


ಹರಿವ ಹೊನಲನು ತಡೆವ ದುರಿತ ಭಾಷೆಯ ತೊಡೆದು

ಗುರಿಯೆಡೆಗೆ ಹೆಜ್ಜೆ ಇಡಬೇಕು ! ನುಡಿಜಾಣ್ಮೆ

ಮರಣದ ಗಂಟೆ ಮಾರ್ಗಿಗೆ !೩೨!


ಭಾಷೆಯಲಿ ಸಿಗುತಿರುವ ಕೋಶಕೋಟಿಯ ಶಬ್ದ

ಖಾಸದನುಭವಕೆ ಅಡ್ಡಿಯು ! ಇದು ಸತ್ಯ

ಮೋಸದಾಟವನು ಅರಿಬಲ್ಲ !೩೩!


ಚಂದದ ಕಲ್ಪನೆಯ ಬಂಧನಕೆ ಸಿಲುಕಿಹೆವು

ಕುಂದಿಸುತ ಗಾಢ ಗ್ರಹಿಕೆಯನು ! ಕಳಚುತ್ತ

ಮುಂದೆ ಸಾಗುವುದು ಉಚಿತವು !೩೪!


ಅಕ್ಕರವ ಕಲಿತವನು ಉಕ್ಕಿನಲಿ ಮೆರೆಯುವನು

ಲೆಕ್ಕ ಮೀರಿದ ವಾದದಲಿ ! ಮುಳುಗುವನು

ಸಕ್ಕರೆಯ ಸವಿಯುಣದೆ ಹೋಗುವನು !೩೫!


ಆದುದರ ಚರಿತೆಯ ವಾದದಲಿ ಸಿಕ್ಕವನು

ಸಾಧಿಸುವ ಆಗು ಮರೆಯುವನು ! ಅವನಿಗೆ

ಬೋಧನೆಯ ಹುಚ್ಚು ಅನುಗಾಲ !೩೬!


***


ನೋವು ನಲಿವೆಂದರಿವ ಭಾವ ದಗ್ಧವ ಮಾಡಿ

ಹೂವು ಸಹಜದಲಿ ತಂತಾನೆ ! ಅರಳುವ

ಜೀವ ನಡೆಮಾರ್ಗ ನಿಜಬಯಲು !೩೭!


ಬಾಟಲಿಯ ಒಳಗಿನ ಬಾತುಕೋಳಿಯ ಹಿಡಿದು

ದಾಟಿಸಲು ಬೇಕು ಸಾಯಿಸದೆ ! ಬಾಟಲಿಯ

ಮಾಟ ಒಡೆಯದೆ ಜಾಣ್ಮೆಯಲಿ !೩೮!


ಬಾಟಲಿಯ ಒಳಗೆ ತಾ ಬಾತುಕೋಳಿಯ ಇರಿಸಿ

ಕೂತು ಕೊಂಡಿರುವ ಮನಸು ಪರಿ ! ಹರಿಯದೆ

ಬಾತು ತಾ ಹೊರಗೆ ಬರಲಾರ್ದು !೩೯!


ಹೇಳೊ ಸಂಗತಿಯಲ್ಲ ಕೇಳುಮಾತದು ಅಲ್ಲ

ಹೇಳು ಕೇಳಿಕೆಯ ಗಡಿದಾಟಿ ! ಅನುಭವದ

ಆಳಕಿಳಿಬೇಕು ಸಹಜದಲಿ !೪೦!


ತುದಿಯೆರಡು ಇಲ್ಲದ ಮಧ್ಯಮವ ಹಿಡಿದವನು

ಸುಧೆಯ ಸವಿರುಚಿಯ ಮೀಯುವನು ! ಬಂಧನದ

ಕುದಿಯನ್ನು ಅಳಿಸಿ ಹಾಕುವನು !೪೧!


ಏನೇನು ಇಲ್ಲದ ಧ್ಯಾನದ ನಿಜ ನೆಲೆಯು

ಮೌನದ ಸೀಮೆ ಮೀರುವುದು ! ಇದ್ದುದನು

ಕಾಣದೂರಿಗೆ ತಳ್ಳುವುದು ! ೪೨!


***


ಯಾವ ಯೋಚನೆ ಚೂರು ಭಾವದಲಿ ಇರಬಾರ್ದು

ಗಾವುದ ದೂರಕೆ ಎಸೆಬೇಕು ! ಚಣಚಣಕು

ದೇವ ಯೋಜಕನ ನೆನೆಬೇಕು !೪೩!


ಇಲ್ಲವೆನುವುದು ದೂರ ಬಲ್ಲೆವೆನುವುದು ಭಾರ

ಸಲ್ಲ ಇವು ಎರಡು ಪಥಿಕನಿಗೆ ! ಹೊರಬಾರ್ದು

ಖುಲ್ಲತನ ಹೆರುವ ಚರಿತೆಯನು !೪೪!


ಎಲ್ಲವನು ಕಳಚಿಟ್ಟು ಇಲ್ಲದವನಾಗುವುದು

ಸಲ್ಲದದು ಬುದ್ಧಿ ಸಂಚಯಕೆ ! ಅದಕಾಗಿ

ಗುಲ್ಲು ಮಾಡದಲೆ ನಡೆಮುಂದೆ !೪೫!


ಹುಟ್ಟಿಲ್ಲದಲ್ಲಮನ ಕಟ್ಟಿಬಂಧಿಸ ಬಹುದೆ

ಮುಟ್ಟವು ಶಬ್ದ ಬಯಲಿಗನ ! ಸೂತಕವು

ತಟ್ಟುವುದು ಅರ್ಥ ಭಾವಕ್ಕೆ !೪೬!


ದೇವನು ಅವನಲ್ಲ ದೇವಸುತ ತಾನಲ್ಲ

ದೇವದೂತನೂ ಮೊದಲಲ್ಲ ! ಪಾಮರನು

ಭಾವ ನಿರ್ವಾಣ ಸಾಧಕನು !೪೭!


ನುಡಿಯ ರೂಪಕದಡಿ ನಡೆಗೆ ಹೊಸತನ ತರಲು

ಬೆಡಗಿನ ಭಾಷೆ ಬಳಸಿದರು ! ಮಾರ್ಗಿಗರು

ದೃಢದಿ ತತ್ವವನು ಸಾರಿದರು !೪೮!


ಬೆಡಗಿನ ಭಾಷೆಯಲಿ ಬೆಡಗು ತಾ ಹುಟ್ಟುವುದು

ಬೆಳಕಿನ ಕಿರಣ ಹರಡುವುದು ! ಲೋಕದ

ಒಳಗಣ್ಣ ಪೊರೆಯ ಕಳಚುವುದು !೪೯!


ಸೃಷ್ಟಿವಾದವು ಇಲ್ಲ ದೃಷ್ಟಿವಾದವು ಇಲ್ಲ

ಪುಷ್ಟಿ ಅವಲಂಬಿ ಮೊದಲಿಲ್ಲ ! ಅಲ್ಲಮನ

ದೃಷ್ಟ ವಚನಗಳ ಒಡಲಲ್ಲಿ ! ೫೦!


ಧ್ಯಾನ ಸೂತಕವುಂಟು ಮೌನ ಸೂತಕವುಂಟು

ಗಾನ ಸಂಗೀತದೊಳಗುಂಟು ! ಲಿಂಗದಲಿ

ನ್ಯೂನವಾಗುವುದು ಸೂತಕವು ! ೫೧!



***"

ಸರಹಪಾದ


ತೆರವು ಇದ್ದರೆ ಮನದಿ ಅರಿವು ಒಳಸೇರುವುದು

ಗುರುವಿನ ಕರುಣೆ ದೊರೆಯುವುದು ! ಜೀವನದಿ

ಸರಹನ ದೋಹೆ ಯಾನದಲಿ !೧!


ಸಹಜಯಾನದ ನೆಲೆಯ ಮಹಿಮೆಯನು ಅರುಹುತ್ತ

ಇಹದ ಪರಿಮಳವ ಸಾರಿದನು ! ಮಾದರಿಯ

ಚಹರೆ ಚಿತ್ತಾರ ಕದಡಿದನು !೨!


ಪರಲೋಕ ಮೋಹವನು ಹರಿಗಡಿದು ಲೌಕಿಕದ

ಪರಮ ಮೌಲ್ಯವನು ತೋರಿದ ! ಮಾಸಿದ್ಧ

ಸರಹಪಾದನನು ನೆನಿಬೇಕು !೩!


ಬಾಣವೆಸೆದಾ ರಮಣಿ ಜ್ಞಾನ ಚಿಂತನ ಗುರುವು

ಧ್ಯಾನಿಸಿದ ಕ್ರಿಯೆಯ ಅರ್ಥವನು ! ಮಾಸಿದ್ಧ

ಪೋಣಿಸಿದ ಎರಡು ಪಾದದಲಿ !೪!


ಇದ್ದ ಜಗದರಿವನ್ನು ಶುದ್ಧ ರೂಪದಿ ಪಡೆದು

ಮದ್ದು ಕಂಡನು ಸಹಜದಲಿ ! ಸರಹನು

ಸಿದ್ಧರ ಸಿದ್ಧ ನಾಗಿಹನು !೫!


ಬಾಣಗಾತಿಯ ಕೈಯ ಜಾಣಸರಹನು ಹಿಡಿದು

ಜ್ಞಾನ ಗಂಗೆಯಲಿ ಮಿಂದನು ! ಅನುಭವದ

ಘನತೇಜ ಕಿರಣ ಹರಡಿದನು !೬!


ಸಬಳಶರ ಕೆತ್ತುವ ಶಬರ ಕನ್ಯೆಯ ಕಂಡು

ಚಬಕ ತಂತ್ರವನು ಅರಿತಂತ ! ಸರಹನು

ಸಬಲ ತತ್ವವನು ಸಾರಿದನು ! ೭!





























ಮಕ್ಕಳ ಕವಿತೆಗಳು -೩

 ಮಕ್ಕಳ ಕವಿತೆ- ೩


೪೦ - ಚಿನ್ನದ ಕರಡು


ಗೌರಿsಶಂಕರ ಎವರೆಸ್ಟ ಶಿಖರ

ತಲೆಯಲಿ ಮೂಡಿದ ಕೋಡು !

ಸಮತೋಲನಕೆ ಹಾಗೇ ಇರಲಿ

ಹಿಮಪರ್ವತದ ಜಾಡು !


ಆಮ್ಲಜನಕದ ರಿಜರ್ವ ಬ್ಯಾಂಕು

ಅಂಡ್ಮಾನಿಕೋಬಾರ್ ಕಾಡು !

ಸಲಹುತಿಹುದು ಪ್ರತಿಫಲ ಬಯಸದೆ

ದಟ್ಟ ಮರಗಳ ಬೀಡು !


ಬಂಗಾಳ್ ಕೊಲ್ಲಿ ಅರಬ್ಬಿ ಹಿಂದೂ

ಸಾಗರ ಅಲೆಗಳ ಹಿಂಡು !

ಹಸಿವಿನ ಹೊಟ್ಟೆಯತುಂಬುತಲಿಹವು

ಜಲಚರ ಜೀವಿಯ ದಂಡು !


ವಿಂಧ್ಯ ಪರ್ವತ ಪಶ್ಚಿಮ ಘಟ್ಟ

ಸಂಜೀವಿನಿಯ ಮೇಡು !

ಕುಕಿಲಿನ ಪಕ್ಷಿ ಕೀಟಗಳೆಲ್ಲವು

ಪ್ರಕೃತಿ ಒಲುಮೆಯ ಹಾಡು !


ಒಕ್ಕಲು ಭೂಮಿಯ ಮೆಕ್ಕಲು ತಾಣಕೆ

ಹಳ್ಳ ಕೊಳ್ಳವೆ ಜೋಡು !

ಪಣತೊಟ್ಟೆಲ್ಲರು ಬೆಳೆಸಲು ಬೇಕು

ಹಸಿರಿನ ಸಂಸ್ಕೃತಿ ನಾಡು !


ಗಿಡಗಂಟಿಗಳು ಭೂಮಿತಾಯಿಯ

ಉದರದ ಚಿನ್ನದ ಕರಡು !

ಹೂವು ಹಣ್ಣು ಕಾಯಿಗಳಿರದಿರೆ

ಮನುಜನ ಬಾಳೆ ಬರಡು !


****

೪೧- ಅಜ್ಜನ ಜೊತೆಗೆ ಆಡಲು…


ಅಜ್ಜನ ಜೊತೆಗೆ ಆಡಲು ನನಗೆ

ತುಂಬಾ ಇಷ್ಟ ಅಮ್ಮ !

ಕತ್ತಲೆ ರಾತ್ರಿ ಕೋಲಿನಿಂದ

ಓಡಿಸಿ ಬಿಡುವನು ಗುಮ್ಮ!


ದೊಡ್ಡ ರುಮಾಲು ಕೈಯ ಕೋಲು

ಮೈಯಲಿ ಚಾಟಿ ಅಂಗಿ !

ಇಂದಿನ ವರೆಗೂ ಸೋತೇ ಇಲ್ಲ

ಸೆಟೆದು ನಿಲ್ಲುವ ಭಂಗಿ !


ಎಪ್ಪತ್ತಾದರು ಗಟ್ಟಿಯಾಗಿವೆ

ಬಿಳಿಯ ಹವಳದ ಹಲ್ಲು !

ಎಷ್ಟು ದುಡಿದರೂ ಮಣಿದೇ ಇಲ್ಲ

ಜೋಡಿ ಎರಡು ಕಾಲು !


ಕುರ್ಲಾನ ಗಾದಿ ದಿಂಬಿಗಿಂತ

ಮೆತ್ತಗೆ ಅಜ್ಜನ ಹೆಗಲು !

ಕೂತು ಆಟ ಆಡುವದೆಂದರೆ

ಸ್ವರ್ಗಕಿಂತ ಮಿಗಿಲು !


ಅವನ ಬಾಯಿಂದ್ ಕೇಳಬೇಕು

ರಾಜಕುವರಿಯ ಕಥನ !

ಏಳು ಮಲ್ಲಿಗೆ ತೂಕ್ದವಳಂತೆ

ಹೊಳೆವ ಹವಳ ರತ್ನ !


ಬೆವರು ಸುರಿಸಿ ದುಡಿವ ಅಜ್ಜ

ನಿಜಕೂ ನೇಗಿಲ ಯೋಗಿ !

ಬಿತ್ತಿ ಬೆಳೆವನು ದವಸ ಧಾನ್ಯ

ಕೂಡದೆ ಒಂದು ಘಳಿಗಿ !


****


೪೨- ನಾಡವರೆಲ್ಲರ ಬಿಂಬ


ಕುರುಕುಲ ರಕ್ಷಣೆ ಮಾಡಲು ನಿಂತನು

ಕುರುಪಿತಾಮಹ ಭೀಷ್ಮ !

ಕುರುಕ್ಷೇತ್ರದ ಯುದ್ಧವು ಮಾಡಿತು

ಕೌರವ ದಂಡನು ಭಸ್ಮ !


ವೀರ ಛಲದ ಸಾಹಸ ಪಾತ್ರಕೆ

ಅಘಟಿತ ಘಟನೆಯ ಹೊಡೆತ !

ಗುಣ ಅವಗುಣ ಮೀರಿದ ತತ್ವಕೆ

ಸೂತ್ರದಾರನ ಸೆಳೆತ !


ದ್ರೋಣ ಭೀಷ್ಮ ವಿದುರರ ನೀತಿಯ

ಮೀರಿ ಬೆಳೆಯಿತು ದ್ವೇಷ !

ತಡೆದ ಮಳೆಯ ಸಿಡಿಲಾರ್ಭಟಿಸಿತು

ಭಿಮಾರ್ಜುನರ ರೋಷ !


ಸರಳ ಸುಲಭದ ಮಾತು ಅಲ್ಲವು

ನ್ಯಾಯನ್ಯಾಯದ ತೂಕ !

ಕಾಲ ಚಕ್ರದ ಗತಿಮತಿಯಲ್ಲಿ

ಮುಳುಗಲೆ ಬೇಕು ಲೋಕ !


ಸೋಲು ಗೆಲುವಿನ ಗೆರೆ ಅಳುಕಿಹುದು

ಹೇಳಲುಬಾರದ ದಿಗಿಲು !

ಅಗಣಿತ ತಾರೆಯನಳೆವವರಾರು

ಅನಂತದಾಚೆಯ ಮುಗಿಲು !


ಭಾರತದೊಡಲಲಿ ಅಡಗಿ ಕುಳಿತಿವೆ

ನಾಡವರೆಲ್ಲರ ಬಿಂಬ !

ಕೂಡಿ ಕಳೆದು ಭಾಗಿಸಲಾಗದು

ಜೀವಯಾನದ ಗುಂಭ !


***







ಮಕ್ಕಳ ಕವಿತೆಗಳು -೨

 (ಶಾಲೆಗಳು ನಡೆಯದ ಸಂದರ್ಭದಲ್ಲಿ)


೧೯ ಎದೆಯ ಸುಡುವ ಶೋಕ


ಮಕ್ಕಳ ಬೆನ್ನಿನ ಸ್ವರ್ಗ ಏರದೆ

ಕಂಗಾಲಾಗಿದೆ ಬ್ಯಾಗು !

ಗೆದ್ದಲು ಹತ್ತಿ ಕಾಲ ಕಳೆವುದು

ಗೋಳಲಿ ಹಾಗು ಹೀಗು !


ವರುಷದಿಂದ ಕೊರಗುತಲಿಹುದು

ಶಾಲೆಯ ನೆಲದ ಹಾಸು !

ಮಕ್ಕಳ ಪಾದ ಸ್ಪರ್ಶವಿಲ್ಲದೆ

ಅಳುತಿದೆ ಎಂಟ್ಹತ್ ತಾಸು !


ಕಳವಳಗೊಂಡ ಟೀಚರ್ ಬಳಗದಿ

ಮಾಸಿಹೋಗಿದೆ ನಗುವು !

ಹತುಂಟರ ತಂಟೆಯ ಉಸಿರೇ ಇರದಿರೆ

ಏತಕೆ ಬೇಕೀ ಜಗವು !


ಧೂಳು ಮೆತ್ತಿ ಬೂಳಸುಗಟ್ಟಿದೆ

ಚಂದದ ಕಪ್ಪು ಹಲಗೆ !

ಪುಟ್ಟರ ಕಲರವ ಜೋಗುಳ ಇಲ್ಲದೆ

ಬದುಕುವುದಾದರು ಹೇಗೆ !


ಮಸಣದಂತೆ ಮಂಕಾಗಿಹುದು

ಶಾಲೆಯ ಆಟದ ಬಯಲು !

ಚಿಣ್ಣರ ಚಿಲಿಪಿಲಿ ಧ್ವನಿಯನು  ಕೇಳದೆ

ದಿಟ್ಟಿಸುತಿಹುದು ಮುಗಿಲು !


ಕೊರೊನಾ ಹೊಡೆತಕೆ ನಲುಗಿ ಹೋಗಿದೆ

ಪುಟಾಣಿ ಪುಟ್ಟರ ಲೋಕ !

ಇನ್ನೂ ಎಂದಿಗೆ ತೊಲಗುವುದೇನೊ

ಎದೆಯನು ಸುಡುವ ಶೋಕ !


***


( ಶಾಲೆಗಳು ಮರು ಪ್ರಾರಂಭವಾದ ಸಂದರ್ಭದಲ್ಲಿ )



೨೦ ಮತ್ತೆ ಬಂದಿದೆ ಜೀವ


ಪಾದದ ಸ್ಪರ್ಶದ ಪುಲಕಿತಗೊಂಡಿದೆ

ಸುಂದರ ಶಾಲೆಯ ಬಯಲು !

ಕಿಲಕಿಲ ನಗುವಿನ ಸದ್ದನು ಕೇಳುತ

ಡೆಸ್ಕು ನಡೆಸಿವೆ ಡೌಲು !


ಪಾಠ ಪ್ರವಚನದಲೆಗಳು ಹರಡಿವೆ

ಶಾಲಾ ಕೊಠಡಿಯ ತುಂಬ !

ತುಂಟ ಮಕ್ಕಳ ಹೆಗಲನ್ನೇರಿ

ಪುಸ್ತಕ ಪಡುತಿವೆ ಜಂಬ !


ಚಪಾತಿ ಅನ್ನದ ಗೆಳೆತನ ಬೆಳೆಸಿವೆ

ಪುಟಾಣಿ ಊಟದ ಡಬ್ಬಿ !

ಕೇಕೆ ಹಾಕುತ ನಲಿದಾಡ್ತಿಹವು

ನೀರಿನ ಬಾಟಲಿ ಉಬ್ಬಿ !


ಒಲವಿನ ಮಕ್ಕಳು ಟೀಚರ ಮೊಗದಲಿ

ಮೂಡಿದೆ ಚೇತನ ಭಾವ !

ಕಪ್ಪು ಹಲಗೆ ಸೀಮೆ ಸುಣ್ಣಕೆ

ಮತ್ತೆ ಬಂದಿದೆ ಜೀವ !


ಬೆಸುಗೆಯಾಗಿದೆ ಪೆನ್ನು ಕಾಗದ

ಮೊದಲಿನ ಗೆಳೆತನ ಬಂಧ !

ಮನಸಿನ ವೇಗವ ಬೆನ್ನತ್ತುವುದು

ಕೈಗಳ ಅಕ್ಷರ ಅಂದ !


***


೨೧ 


ಅಮರ ಅದ್ಭುತ ಕಲ್ಪನೆ


ಚಲುವು ಚೈತ್ರದ ಮೃದುಲ ಸ್ಪರ್ಶಕೆ

ಚಿಗುರು ಪುಳುಕಿತು ಮಾಮರ !

ಗಿಡಕೆ ಹಬ್ಬಿದ ಬಳ್ಳಿ ಸುರಿಯಿತು

ಮಧುರ ಮಲ್ಲಿಗೆ ಹೂಸರ !


ನವಿಲು ಬಣ್ಣದ ಗರಿಯ ಕೆದರುತ

ಕುಣಿಯ ಹತ್ತಿತು ಥಕಥಕ !

ಗಿಳಿಯ ಮಾತಿಗೆ ಹೊಳೆಯತೊಡಗಿತು

ಬಾನ ಚುಕ್ಕೆಯು ಲಕಲಕ !


ತಲೆಯ ತೂಗುತ ಹೂವು ಕರೆಯಿತು

ದುಂಬಿ ಹಿಂಡನು ಸನಿಹಕೆ !

ಮೌನದಿಂದಲೆ ಸವಿಯುತಿರುವವು

ಮಧುರ ಪರಿಮಳ ಕಾಣಿಕೆ !


ಲಲಿತ ಗೆರೆಗಳು ಸೆರೆಯ ಹಿಡಿದಿವೆ

ಅಮರ ಅದ್ಭುತ ಕಲ್ಪನೆ !

ದಿನದ ಪ್ರತಿಕ್ಷಣ ಸಲಿಸಬೇಕಿದೆ

ಪ್ರಕೃತಿ ಮಾತೆಗೆ ವಂದನೆ !


***


೨೨ ಅದ್ಭುತ ಲೋಕ 


ಕಲ್ಪನೆ ಮಾಡಿದ ವಸ್ತುಗಳೆಲ್ಲ

ರೇಖೆಗೆ ಜೀವ ಕೊಟ್ಟಾವು !

ಕನಸಲಿ ಕಂಡ ಚಿತ್ರಗಳೆಲ್ಲ

ಬಣ್ಣದ ವೇಷ ತೊಟ್ಟಾವು !


ಆಗಸ ಚುಕ್ಕೆ ಕರಿಬಿಳಿ ಮೋಡ

ಮನಸಲಿ ಅಚ್ಚು ಒತ್ತ್ಯಾವು !

ಮರಗಿಡ ಬಳ್ಳಿ ಹೂವುಗಳೆಲ್ಲ

ಭಾವಕೆ ಮುದ್ರೆ ಹಾಕ್ಯಾವು !


ಬೆಕ್ಕು ನಾಯಿ ಮುದ್ದಿನ ಕರುವು

ಗೆರೆಗಳ ಬಳುಕನು ಮೀಟ್ಯಾವು !

ಕೋಗಿಲೆ ಗಿಳಿ ಗುಬ್ಬಚ್ಚಿಗಳು

ಬಣ್ಣದ ಸೀಮೆಯ ದಾಟ್ಯಾವು !


ಅಮ್ಮ ನೋಡು ಚಿತ್ರಗಳೆಲ್ಲ

ಅದ್ಭುತ ಲೋಕ ತೋರ್ಯಾವು !

ಮೂಡು ಮೂಡುತ ಜೀವ ತಳೆದು

ಬಾನಂಗಳಕೆ ಹಾರ್ಯಾವು !


ಪ್ರಶ್ನೋತ್ತರದ ಪಾಠಕ್ಕಿಂತ

ಮನಸಿಗೆ ಮುದವ ನೀಡ್ಯಾವು !

ಅಂಕ ಸ್ಪರ್ಧೆಯ ಕಾಟ ತಪ್ಪಿಸಿ

ಭಾವಕೆ ಹೊಳಪು ಕೊಡ್ತಾವು !





೨೩ ಕಲ್ಪನೆ ರೆಕ್ಕೆಗಳು


ಏರೋಪ್ಲೇನು ಬಸ್ಸು ರೈಲು

ಎಲ್ಲವೂ ಇದರ ಹಿಂದೆ !

ಪೆಟ್ರೋಲ್ ಡಿಜೇಲ್ ಬೇಡದ ಗಾಡಿ

ಜಗದಲಿ ಇರುವುದು ಒಂದೆ !


ಬಡವ ಬಲ್ಲಿದ ಮೇಲು ಕೀಳು

ಭೇದವೆಂಬುದೆ ಇಲ್ಲ !

ಅರಮನೆ ಮಹಡಿ ಗುಡಿಸಲಿನಲ್ಲು

ಕಂಡು ಬರುವುದಲ್ಲ !


ಅಜ್ಜ ಅಜ್ಜಿ ತೋರುವ ಪ್ರೀತಿಗೆ

ಬೆಲೆಯ ಕಟ್ಟುವದೆಂತು !

ಬಣ್ಣಿಸಲಾರೆನು ಶಬ್ದವೆ ಸಾಲವು

ನೋಡಿರಿ ಒಮ್ಮೆ ಕುಂತು !


ಅವ್ವ ಅಪ್ಪನ ನೆನಪೆ ಬಾರದು

ಆಟ ಆಡುತ ಇದ್ರೆ !

ಹೊಟ್ಟೆ ತಾಳ ಹಾಕುತಲಿದ್ರೂ

ಅನಿಸುವುದಿಲ್ಲ ತೊಂದ್ರೆ !


ಕೊರೊನಾ ವೈರಿ ಬಂಧಿಸಿ ಇಟ್ಟರು

ಅಜ್ಜ ಮೊಮ್ಮಕ್ಕಳನ್ನು !

ಕತ್ರಿಸಿ ಒಗೆಯಲು ಯಾರಿಗೂ ಆಗದು

ಕಲ್ಪನೆ ರೆಕ್ಕೆಗಳನ್ನು !


***


೨೪ ಹಾಕಿದಂಗ ಮಂತ್ರ


ಅವ್ವಾ ನೀನು ಹೇಗೆ ಕಲಿತೆ

ಕೌದಿ ಹೊಲಿಯುವ ತಂತ್ರ !

ಹೊದ್ದ ಕೂಡ್ಲೆ ಕನಸೊ ಕನಸು

ಹಾಕಿದಂಗ ಮಂತ್ರ !


ಬಣ್ಣದ ಗುಬ್ಬಿ ಮಾತಾಡುವವು

ಚಿಲಿಪಿಲಿ ಚಿಲಿಪಿಲಿ ಅಂತ !

ನಮ್ಮ ಊರಿನ ವಸವನ ತೇರು 

ಸಾಗಿ ಬಿಡುವುದು ಶಾಂತ !


ಗೊಂಬೆ ಸಾಲು ತಂದುಬಿಡುವವು

ಮರೆತ ಮಗ್ಹಿ ನೆನಪು !

ಅವ್ವನ ಹತ್ತಿರ ಮಲಗಿ ಬಿಟ್ಟರೆ

ಮತ್ತೆ ನಿದ್ರೆಯ ಜೊಂಪು !


ಬೆಚ್ಚಗಿರುವುದು ಚಳಿಗಾಲದಲಿ

ಬೇಸಿಗೆಯಲ್ಲಿ ತಂಪು !

ಮಳೆಗಾಲ್ದಲ್ಲಿ ತಪ್ಪಂಗಿಲ್ಲ

ತಮ್ಮನ ತೀರ್ಥದ ಕಂಪು !


ಗುಬ್ಬಿ ತೇರು ಪಗಡಿ ಹಚ್ಚಿ 

ಅವ್ವ ಹೊಲಿದ ಕೌದಿ !

ದಿನದಿನ ದಿನವು ತೋರಿಸುತಿರುವುದು

ಹೊಸಕಲ್ಪನೆಯ ಹಾದಿ !


***


೨೫ ದುರಂತ  ಕಾಲ !


ಪ್ರಕೃತಿಯೊಂದಿಗೆ ಹೊಂದಿಕೊಂಡಿವೆ

ಲೋಕದ ಎಲ್ಲಾ ಪ್ರಾಣಿ !

ಮನುಜನೊಬ್ಬನೆ ಭೂಮಿತಾಯಿಯ

ಕೊರಳಿಗೆ ಅಂಟಿದ ಜಿಗಣಿ !


ಪ್ರಗತಿಯ ಹೆಸರಲಿ ಕಾಡನು ಸವರಿಹ

ಹಿಡಿದು ಕರಗಸ ಜರಡಿ !

ಹುಸಿ ಸಂಪತ್ತಿನ ಕನಸಲಿ ತೇಲಿಹ

ಕಟ್ಟುತ ಕಂಕ್ರೀಟ್ ಮಹಡಿ !


ಹೊಸಪ್ರಯೋಗದಿ ಚಣಚಣ ನಡೆಸಿಹ

ನೆಲದೆದೆ ಸುಡುವ ಶೋಧ !

ಜೀವ ರಾಸಿಯ ಗೋರಿಯ ಮೇಲೆ

ಕಟ್ಟುತಲಿಹನು ಸೌಧ !


ಹೊಗೆ ಉರುಳಿನಲಿ ಕತ್ತರಿಸಿಹನು

ತಾಯ ಮೊಲೆಹಾಲ್ ಬೇರು !

ಹರಿದು ಹುರಿದು ಚಿಂದಿಯ ಮಾಡಿಹ

ಓಝೋನ್ ರಕ್ಷಾ ಪದರು !


ತಾಯ ಗರ್ಭಕೆ ತಿವಿಯುತಲಿಹವು

ನೂರು ಸಾವಿರ ಶೂಲ !

ತನಗೆ ತಾನೆ ತಂದು ಕೊಂಡಿಹ

ದುರಂತದಂತ್ಯದ ಕಾಲ !


***


೨೬ ತುಂಬಲಿ ಎದೆಯಲಿ ಅಭಿಮಾನ !


ಸರ್ವರು ಕೂಡಿ ಮಾಡುವ ಬನ್ನಿ

ಭಾರತ ಮಾತೆಯ ಗುಣಗಾನ !

ಗುಪ್ತಗಾಮಿನಿ ಚಿರಸಂಜೀವಿನಿ

ತುಂಬಲಿ ಎದೆಯಲಿ ಅಭಿಮಾನ !


ಹಲವು ಭಾಷೆ ಹಲವು ಮತಗಳ

ಬೆರೆಸಿದ ಸಂಪುಟ ಸಂಕಲನ !

ಹಲವು ಬಣ್ಣದ ಹಲವು ಬಗೆಗಳ

ಬೆಸೆಯುವ ಸೂರ್ಯನ ಹೊಂಗಿರಣ !


ಏಳು ಬೀಳಿನ ಕಷ್ಟ ಸಮಯದಿ 

ಮರೆತರೆ ಚನ್ನ ಭಿನ್ನಮತ !

ದೇಶದ ಏಳಿಗೆ ವಿಕಸನಕಾಗಿ

ಹರಿಯಲಿ ಜ್ಞಾನವು ಪ್ರವಹಿಸುತ !


ನಾಡನು ಕಟ್ಟಿ ಬೆಳೆಸಲು ಬೇಕು

ಬೆವರನು ಸುರಿಸಿ ಶ್ರಮಿಸುತ್ತ !

ವಿಶ್ವಕೆ ಮಾದರಿ ಭರತ ವರ್ಷವು

ತೋರಲಿ ಕೂಡಿ ಬದುಕುತ್ತ !


ತ್ರಿವರ್ಣ ಧ್ವಜವು ಸಮರಸ ಬರೆಸಿ

ಏರುತ ಹಾರಲಿ ಬಾನಲ್ಲಿ !

ದೇಶ ಪ್ರೇಮದ ಜ್ಯೋತಿ ಬೆಳಗಲಿ

ನಾಡಿಗರಂತರಂಗದಲಿ !


೨೭ ಗುರು


ಕರಿಯ ಪಾಟಿಯ ಒಡಲ ಬಯಲಲಿ

ಬಿಳಿಯ ಬಳಪದ ಅಕ್ಷರ‌ !

ಬಾನ ಚುಕ್ಕೆಯ ಎಣಿಸಿ ತೋರುತ

ಮಾಡಿದೆನ್ನನು ಸಾಕ್ಷರ‌ !


ಎಲ್ಲಿ ನಿಲದಿರು ಎಂದು ತುಂಬಿದ

ಹರಿವ ಜಲದ ಗುಣವನು !

ಸೊಲ್ಲು ಸೊಲ್ಲಲಿ ಬೆರೆಸಿ ಬೀರಿದ

ಹೂವು ಪರಿಮಳ ಮಧುವನು ! 


ಆಟವಾಡುತ ಕಲಿಸಿ ಬಿಟ್ಟನು

ಸಾಗರಾಳದ ಈಜನು !

ತೆರೆದ ಮನದಲಿ ಸವಿಯ ಹಚ್ಚಿದ

ದಿಟದ ಜೀವನ ಮೋಜನು !


ಕೆದಕಿ ಸುರಿಸಿದ ಕನಸು ಕಲ್ಪನೆ

ಒಳಗು ಹೊರಗಿನ ಬೆಡಗನು !

ಹುಸಿಯ ಕರಗಿಸಿ ಗಟ್ಟಿಗೊಳಿಸಿದ

ದೂರ ಪಯಣದ ಹಡಗನು !


ಹಾಳು ಮನೆಯಲಿ ಬೀಳು ಬಿಟ್ಟಿಹ

ಕಾಳ ಕತ್ತಲೆ ತೊಲಗಿಸಿ !

ಎದೆಯ ಹೊಲದಲಿ ಸುಧೆಯ ಬಿತ್ತಿದ

ಮಧುರ ಜ್ಞಾನವ ತುಳುಕಿಸಿ !


***

೨೮ ಬಕಾಸುರನ ಕತೆ


ಏಕಚಕ್ಕರ ಪುರದ ಹತ್ತಿರ 

ಕಾಕ ರಕ್ಕಸನೊಬ್ಬನಿರುವನು

ಕೇಕೆ ಹಾಕುತ ಊರ ಜನರಿಗೆ ಹಿಂಸೆ ಮಾಡುವನು |

ಏಕೆ ಹಿಂಸೆಯ ಮಾಡುತಿಹೆನೀ 

ನಾಕು ಪಲ್ಲದ ಅನ್ನ ಬಂಡಿಯ 

ಮೂಕ ಕೋಣನ ಜೊತೆಗೆ ಮನುಜನ ಬಲಿಯ ನೀಡುವೆವು |


ದಿನವು ಕೋಣದ ಬಂಡಿ ಅನ್ನವು 

ಮನುಜನೊಬ್ಬನ ಸಹಿತ ಬರಲದ 

ಕುಣಿದು ನಲಿಯುತ ತಿಂದು ತೇಗುತಲಿದ್ದ ರಕ್ಕಸನು |

ಮನೆಗೆ ಸರತಿಯ ಹಾಕಿಕೊಳ್ಳುತ

ಜನರು ಅನ್ನವ ಕಳಿಸಿಕೊಡಲಾ

ದಿನದ ಪಾಳೆಯ ಬರಲು ಬ್ರಾಹ್ಮಣ ಹೆದರಿ ನಡುಗಿದನು |


ಇದ್ದ ಒಬ್ಬ ಮಗನನೀಗಲೆ

ಕುದ್ದು ಕಳುಹಲು ಒಪ್ಪಿಕೊಳ್ಳದೆ 

ವೃದ್ಧನಾದರು ಚಿಂತೆಯಿಲ್ಲವು ಬಂಡಿ ಒಯ್ಯುವೆನು |

ಮುದ್ದು ಮಕ್ಕಳು ಮಡದಿ ಎಲ್ಲರು 

ಸದ್ದು ಮಡುತ ಅಳುತಲಿದ್ದುದ

ಕದ್ದು ಕೇಳಿಸಿಕೊಂಡ ಕುಂತಿಯು ಹೀಗೆ ಹೇಳಿದಳು |


ಹಲವು ಮಕ್ಕಳು ಇಹರು ನನಗಾ

ಬಲದ ಮಗನನು ಕಳುಹಿಕೊಡುವೆನು 

ಒಲವು ತೋರುತ ಜಾಗ ನೀಡಿದ ನಿಮ್ಮ ಉಪಕೃತಿಗೆ |

ಬಿಲದ ಒಳಗಡೆ ಇರಲಿ ಮಾತಿದು 

ನಲಿವಿನಿಂದಲಿ ತಿಳಿಸಿ ಬೇಡಿದ 

ಕುಲದ ಮಂದಿಗೆ ಬಂದು ಬಳಗಕೆ  ಮೌನ ಪಾಲಿಸಿರಿ |


ಬಲದ ತನ್ನಯ ಮಗನ ಕರೆಯುತ 

ಚಲವ ತೋರುವ ಕಾಲ ಎನ್ನುತ 

ಕೆಲವು ಗುಟ್ಟಿನ ಮಾತ ಹೇಳುತ ಬೆನ್ನು ಸವರಿದಳು |

ತಲೆಯದೂಗಿದ ತಾಯಿ ಮಾತಿಗೆ 

ನಲಿವಿನಲ್ಲಿಯೆ ಬಂಡಿ ಹತ್ತುತ 

ಕೊಲುವೆನೀಗಲೆ ಕೆಟ್ಟ ರಕ್ಕಸನೆಂದು ಸಾಗಿದನು |


ಹೊಟ್ಟ ಹಸಿವನು ತಾಳಲಾರದೆ 

ಇಟ್ಟ ಅನ್ನದ ಹಂಡೆ ಬಾಗಿಸಿ 

ಮುಟ್ಟಿ ಮುಟ್ಟಿಗೆ ನುಂಗುತಿದ್ದನು ಬೇಗಬೇಗದಲಿ |

ಗಟ್ಟಿ ಕೂಗನು ಹಾಕಿ ರಕ್ಕಸ 

ನೆಟ್ಟ ನೋಡುತ ಬಂದು ನಿಂತನು 

ದಿಟ್ಟ  ಭೀಮನ ಕಂಡು ಮನದಲಿ ಕೋಪ ತಾಳಿದನು |


ಸಿಟ್ಟಿನಲಿ ಹೂಂಕರಿಸಿ ಒಮ್ಮೆಗೆ 

ಮುಷ್ಠಿ ಮುಷ್ಠಿಲಿ ಬೆನ್ನ ಮೇಲ್ಗಡೆ 

ಕೊಟ್ಟ ಏಟನು ಸುಮ್ಮ ತಿಂದಾ ಭೀಮ ಹೇಳಿದನು |

ಕಟ್ಟ ಕಡೆದಿದು ಅನ್ನ ಉಂಡೆಯು

ಗಟ್ಟಿಯಾಗಿಯೆ ಗುದ್ದು ಕೊಡು ನೀ 

ನೆಟ್ಟನಿಳಿಯಲಿ ಗಂಟಲಿಂದಲಿ ಅನ್ನ ಹೊಟ್ಟೆಯಲಿ |


ಉಂಡು ತೇಗುತಲೆದ್ದ ಭೀಮನು 

ಗಂಡುಗಚ್ಚಿಯ ಹಾಕಿ ನಿಂದನು 

ರುಂಡ ಬಗ್ಗಿಸಿ ಬೆನ್ನ ಮೇಲ್ಗಡೆ ಏಟು ಹಾಕಿದನು |

ಪುಂಡ ಭೀಮನು ಎದೆಗೆ ಗುದ್ದಲು

ಬಂಡ ರಕ್ಕಸ ಕುಸಿದು ಬಿದ್ದನು 

ತೊಂಡ ತೊಂಡಲು ಕರುಳು ಚಿಮ್ಮಿದವಾಗ ಆಗಸಕೆ |


ಎತ್ತಿ ಹೆಣವನು ಬಂಡಿಗೇರಿಸಿ 

ಕತ್ತಲಾಗುವ ತನಕ ಕಾದನು 

ಗೊತ್ತು ಆಗದ ಹಾಗೆ ತಂದನು ಅಗಸಿ ಬಾಗಿಲಿಗೆ |

ಸುತ್ತ ಮುತ್ತಲ ಸದ್ದು ಅಡಗಲು

ಕತ್ತು ಕಾಲಿಗೆ ಹಗ್ಗ ಬಿಗಿದನು 

ಸತ್ತ ಬಕನನು ತೂಗುಬಿಟ್ಟನು ಉಗ್ರ ರೂಪದಲಿ |


ಅಗಸಿ ಬಾಗಿಲಿನಲ್ಲಿ ನಿಂತಿಹ 

ಜಗದ ಕಂಟಕ ಬಕನ ಕಾಣುತ 

ಜಿಗಿದು ಓಡಿದನೊಬ್ಬ ಪುಕ್ಕಲು ಜೀವ ಭಯದಲ್ಲಿ |

ದಗೆಯ ಹಸಿವಿಗೆ ಊರ ಹೊಕ್ಕನು 

ಸಿಗುವ ಜನರನು ಪ್ರಾಣಿ ಎಲ್ಲವ 

ಸಿಗಿದು ತಿನುವನು ಎನುತ ಸುದ್ದಿಯ ಹರಡಿ ಪುರದಲ್ಲಿ |


ಗಟ್ಟಿ ಧೈ ರ್ಯದ ಎಂಟು ಮಂದಿಯು 

ಒಟ್ಟುಗೂಡುತ ಬಂದರಗಸಿಗೆ 

ಕಟ್ಟಿ ಬಿಗಿದಾ ಕಾಲು ಕೈಗಳ ನೋಡಿ ಹೇಳಿದರು |

ಕೊಟ್ಟಿ ರಕ್ಕಸ ಸತ್ತು ಹೋದನು 

ಸುಟ್ಟು ಹಾಕಲು ಸೌದೆ ತನ್ನಿರಿ 

ಜಟ್ಟಿ ಯಾವನೊ ಕೊಂದು ಊರಿಗೆ ಒಳಿತು ಮಾಡಿದನು |


ಆದಿ ಪರ್ವದಿ ಬರುವ ಕತೆಯನು 

ನಾದ ಭಾಮಿನಿ ಪದ್ಯ ಬಳಸುತ 

ಸ್ವಾದ ಎನಿತೂ ಕೆಡದ ಹಾಗೆಯೆ ಹೆಣೆದು ಇರಿಸಿರುವೆ |

ಓದು ಬರಹವ ಬಲ್ಲ ದೇವರು 

ಭೇದವೆನಿಸದೆ ತಪ್ಪು ತಡೆಗಳ 

ಮೇದು ಸವಿಯಿರಿ ಚಂದ್ರ ಗೌಡನ ಕವನ ಪುಟ್ಟ ಕಾವ್ಯವನು |

***

೨೯ ಗೊಮ್ಮಟನಾದನು ಬಾಹುಬಲಿ


ಹಿರಿಯ ಸೋದರ ಭರತ ಚಕ್ರಿಯ

ಎದುರು ನಿಂತನು ರಣದಲ್ಲಿ !

ರಾಜ ಧರ್ಮದಿ ಯುದ್ಧಮಾಡಿದ

ಸೋಲನೊಪ್ಪದೆ ಸುಲಭದಲಿ !


ದೃಷ್ಟಿ ಮುಷ್ಟಿ ಜಲದ ಯುದ್ಧವ

ಗೆಲ್ಲುವ ಕೊನೆಯ ಗಳಿಗೆಯಲಿ !

ರಾಜ್ಯದಾಸೆಗೆ ಅಣ್ಣನ ಕೊಲುವುದೆ

ವಿರತಿ ಜನಿಸಿತು ಮನದಲ್ಲಿ !


ಆಗಸದೆತ್ತರಕೆತ್ತಿದ ಅಣ್ಣನ

ಇಳಿಸಿದ ಹೂಮೃದು ಸ್ಪರ್ಶದಲಿ !

ತಂದೆಯು ಕೊಟ್ಟ ಪೌದನಪುರವನು

ಒಪ್ಪಿಸಿಬಿಟ್ಟನು ಕ್ಷಣದಲ್ಲಿ !


ತ್ಯಾಗ ಯೋಗದ ತೇಜದಿ ಮಿಂದು

ಗೊಮ್ಮಟನಾದನು ಬಾಹುಬಲಿ !

ಬೆಳಗೊಳ ಬೆಟ್ಟವನೇರಿ ನಿಂತು

ಅಚ್ಚರಿ ತುಂಬಿದ ಕಂಗಳಲಿ !


ಅರಿಷ್ಟ ನೇಮಿಯ ಕೈಚಳಕಕ್ಕೆ

ಎಣೆಯೇ ಇಲ್ಲಾ ಲೋಕದಲಿ !

ಚಾವುಂಡರಾಯನ ಕನಸು ಕಲ್ಪನೆ

ರೂಪತಾಳಿತು ಬಂಡೆಯಲಿ !


****


೩೦ ಸಾವಿರದ ಕತೆ ಮಹಾಭಾರತ


ವ್ಯಾಸಮುನಿಯು ರಚಿಸಿದಂತಹ

ಮಹಾಕಾವ್ಯವು ಭಾರತ !

ಜನಪದರೆಲ್ಲರ ನಾಲಿಗೆ ಮೇಲೆ

ನಲಿಯುತಲಿರುವುದು ಜೀವಂತ !


ಆದಿಮಕಾಲಕು ಕೈಚಾಚಿರುವ

ಪ್ರಾಚೀನ ಕಥನದಿ ಏನುಂಟು !

ದೇಸಿನೆಲೆಯ ಖಾಸ ಬದುಕನು

ತೆರೆದಿರಿಸಿರುವ ಇಡಿಗಂಟು ! 


ಸಂಸ್ಕೃ ತಮಿಳು ತೆಲುಗು ಬೆಂಗಾಲಿ

ಹಿಂದಿ ಮರಾಠಿ ಭಾಷೆಯಲಿ !

ಹೊಸಹೊಸ ರೂಪವ ತಾಳಿನಿಂತಿದೆ

ಹಲವು ಸಂಸ್ಕೃತಿ ವೇಷದಲಿ !


ಪಂಪರನ್ನ ಕುಮಾರವ್ಯಾಸರ

ಸೆಳೆದುಬಿಟ್ಟಿದೆ ಈಕಥನ !

ಕನ್ನಡ ಮಣ್ಣಿನ ಸತ್ವವ ಪಡೆದು

ಮೂಡಿಸುತಲಿರುವುದು ಸಂಚಲನ !


ಕುರುಪಾಂಡವರ ಸೇಡಿನ ಕದನವು

ಕತೆಯಲಿ ಒಂದು ನೆಪ ಮಾತ್ರ!

ಒಳಗಡೆ ನಡೆವುದು ಗುಣಾವಗುಣಗಳ

ಅದ್ಭುತ ಲೋಕದ ರಸಚಿತ್ರ !


ಭೀಷ್ಮ ದ್ರೋಣ ವಿದುರ ಕೃಪರು

ಅವತರಿಸುವರು ಮನದೊಳಗೆ !

ಕರ್ಣ ಅರ್ಜುನ ಭೀಮ ದುರ್ಯೋಧನ

ಶಕುನಿಗಳೆಲ್ಲರು ನಮ್ಮೊಳಗೆ !


ವಸುದೇವ ಕೃಷ್ಣ ಬಲದೇವ ಕಂಸ

ಕುರು ಪಾಂಡವರ ನೆಂಟರು !

ಬಕ ಹಿಡಿಂಬ ಘಟೋತ್ಕಚರು

ದೈತ್ಯ ಶಕ್ತಿಯ ಬಂಟರು !


 ಅಭಿಮನ್ಯು ಬಭ್ರು ಏಕಲವ್ಯರು

ಶಸ್ತ್ರ ವಿದ್ಯೆಯ ಬಲ್ಲವರು !

ಅಂಬೆ ಕುಂತಿ ಗಾಂಧಾರಿ ದ್ರೌಪತಿ

ಎಲ್ಲರ ಮನವನು ಗೆಲ್ಲುವರು !


ನಳ ಶಾಕುಂತಲ ಸತಿಸಾವಿತ್ರಿ

ಕತೆ ಉಪಕತೆಗಳ ಜೇನಹೊಳೆ !

ಹತ್ತು ಹಲವು ಪಾತ್ರಗಳೆದೆಯಲಿ

ತುಂಬಿಹರಿವುದು ಜೀವಕಳೆ !


ಭೋಗತ್ಯಾಗದ ಮಹತಿ ಅಡಗಿದೆ

ಶುಕ್ರಾಚಾರ್ಯರ ಶಾಪದಲಿ !

ಯಯಾತಿ ದೇವಯಾನಿ ಶರ್ಮಿಷ್ಠೆಯ

ಉಪ ಆಖ್ಯಾನದ ಕತೆಯಲ್ಲಿ !


ಅಜ್ಞಾತವಾಸದ ವಿರಾಟನಗರದಿ

ದಾಸಿ ವೇಷದ ದ್ರೌಪತಿ !

ನಾಟ್ಯಶಾಲೆಗೆ ಮಧುವನು ತಂದು

ಪಡೆದಳು ಕೀಚಕನಾಹುತಿ !


ಭೀಷ್ಮ ಪ್ರತಿಜ್ಞೆ ಕುರುಡುಪ್ರೀತಿ

ಅರಗಿನ ಮನೆಯ ನಿರ್ಮಾಣ !

ಜೂಜಿನ ಪಗಡೆ ಅಕ್ಷಯಾಂಬರ

ದುರಂತ ತುಂಬಿದ ಹರಿವಾಣ !


ವೀರ ಸಾಹಸ ಸಹನೆ ಮತ್ಸರ

ಬೆರೆತುಕೊಂಡಿವೆ ಕತೆಯಲ್ಲಿ !

ವಿನಯ ಗರ್ವ ಪ್ರತಿಷ್ಠೆ ಪಣಗಳು

ಮೆರೆದಿವೆ ಉಜ್ವಲ ಪಾತ್ರದಲಿ!


ಆಲದ ಕಾಂಡ ಬೇರು ಬಿಳಲು

ಬೆಸೆದುಕೊಂಡಿವೆ ಬಂಧುರ !

ಸಾವನು ಮೀರಿದ ವಿಸ್ಮಯ ಬೆರಗು

ಹಬ್ಬಿ ತಬ್ಬಿವೆ ಹಂದರ !


ನಾಟಕ ಕಾವ್ಯ ಮಹಾಕಾವ್ಯದ

ಟಿಸಿಲೊ ಟಿಸಿಲು ನೂರಾರು !

ಕಾದಂಬರಿ ಕತೆ ಪುನರವತಾರದ

ಪರ್ವವೆ ನಡೆದಿದೆ ಬಲುಜೋರು !


ಆಟ ಬಯಲಾಟ ಯಕ್ಷಗಾನದಿ

ಚಿಮ್ಮಿಸಿ ಬಿಡುವುದು ಸಂಭ್ರಮ !

ಪುರಾಣ ಪ್ರವಚನ ಕೀರ್ತನಗಳಲಿ

ನುಡಿಸುತಲಿರುವುದು ಸರಿಗಮ !


ಅಂದಿನ ಕತೆಯು ಇಂದಿಗೂ ಹೊಂದುತ

ತೋರುವುದೆಮ್ಮಯ ಬಿಂಬವನು !

ಕೇಳುತ ಓದುತ ಒಳಗೆ ಬೆಳೆದು

ಒಡೆವುದು ಬಾಳಿನ ಗುಂಭವನು !


ನ್ಯಾಯ ಅನ್ಯಾಯ ಧರ್ಮ ಅಧರ್ಮಕೆ

ಗೆರೆಯನೆಳೆವುದು ಕಡುಕಷ್ಟ !

ಜಿದ್ದಾ ಜಿದ್ದಿನ ಪಣದಲಿ ಸಿಕ್ಕು

ಬಳಲುವ ಚಿತ್ರವು ಬಲುಸ್ಪಷ್ಟ !


ಕಾಡಿನ ನಾಡಿನ ಅದ್ಭುತ ಕಾವ್ಯಕೆ

ಯಾವುದು ನಿಲ್ಲದು ಸರಿಸಾಟಿ !

ಗಂಗೆ ಕಾವೇರಿ ಹೊನಲಾಗಿಹುದು

ಮಿಡಿಕುಡಿ ಜೀವದ ಒಳತೋಟಿ !


ಗೆದ್ದವರಾರು ಸೋತವರಾರು

ಎಲ್ಲರ ಮನದಲಿ  ತಾಕಲಾಟ !

ಸೋಲು ಗೆಲುವನು ಮೀರಿದ ಬದುಕಿಗೆ

ನಡೆದಿದೆ ಇಲ್ಲಿ ಹುಡುಕಾಟ !

***


೩೧ ತಕದಿ ತೋಂತನ


ಕಣ್ಣ ನೋಟ ಮೊಗದ ಹಾಸ

ಭಾವದಲೆಯ ಚಾರಣ !

ಲಲಿತ ಹೆಜ್ಜೆ ನುಡಿವ ಗೆಜ್ಜೆ

ನೃತ್ಯ ಕಲೆಯ ಹೂರಣ !


ಬಾಗು ಬಳುಕು ಉಡುಗೆ ತೊಡುಗೆ

ಬೆರಗು ಬೆಡಗು ತೋರಣ !

ರಾಗ ಲಹರಿ ನಾದ ಚಿಗುರಿ

ತಾಳ ಮೇಳ ಧಾರಣ ! 


ದೇಹದಂಗ ಚಲುವಿನಲ್ಲಿ

ರೂಪು ತಳೆವ ಚೇತನ !

ಸೃಷ್ಟಿಶೀಲ ಪ್ರತಿಭೆ ತೊಟ್ಟು

ಹಾರುತಿರುವ ಕೇತನ !


ರಸಿಕನೆದೆಯಲಾಡಿ ನಲಿವ

ಪುಳಕ ನವಿರು ಸಿಂಚನ !

ಮೋಡ ಗುಡುಗು ಮಳೆಯ ಹನಿಗೆ

ನವಿಲು ಗರಿಯ ಚಲ್ಲಣ !


ಪಾದ ಚಲನೆ ಮಧುರ ಗತಿಗೆ

ನೂರು ನೂರು ರಿಂಗಣ !

ಹೃದಯ ಮೂಲೆ ಮೂಲೆಯಲ್ಲು

ಧೀಮ್ತ ತಕದಿ ತೋಂತನ !

***


೩೨ ಬೆರೆಸಿವೆ ಎಳ್ಳು ಬೆಲ್ಲ


ಮಹಾಭಾರತ ರಾಮಾಯಣಗಳು

ಕೇವಲ ಕಾವ್ಯಗಳಲ್ಲ !

ವಿಶ್ವದ  ಜನರ ಸುಂದರ ಬಾಳಲಿ

ಬೆರೆಸಿವೆ ಎಳ್ಳು ಬೆಲ್ಲ !


ಎದುರಲಿ ಕೂತು ಕತೆಯನು ಕೇಳಲು

ಮೂಡಿ ನಿಲುವವು ಪಾತ್ರ !

ಮೈಮನ ತುಂಬ ರೂಪಗೊಳುವವು

ಅಳಿಸಲಾರದ ಚಿತ್ರ !


ಕಿರಿಯರು ಯುವಕರು ಹಿರಿಯರಿಗೆಲ್ಲ

ಆಯಸ್ಕಾಂತದ ಸೆಳೆತ !

ಸಂಕಟ ನೋವು ಸಂಭ್ರಮ ಸಡಗರ

ಭಾವಕೆ ಇಳಿವವು ಶಾಂತ !


ಕಥನ ವಾಚನ ಗಮಕಗಳಲ್ಲಿ

ಬೆರೆಸಿವೆ ಸುಮಧುರ ‌ನಾದ !

ತಾಳ ತಂಬೂರಿ ರಾಗದ ಅಲೆಯಲಿ

ಅಡಗಿದೆ ಅಮೃತ ಸ್ವಾದ !


ತ್ರೇತಾ ದ್ವಾಪರ ಯುಗಗಳಿಂದಲೂ

ಹರಿದು ಬಂದಿದೆ ಸ್ರೋತ !

ದಿನದಿನ ದಿನವೂ 

ಅಳಿಸುತ ಮನಸಿನ ಭ್ರಾಂತ !

***


೩೩ ಏಕ ಶಿಲೆಯ ದೇಗುಲ


ಏಕಶಿಲೆಯಲಿ ಕೆತ್ತಿದ ದೇಗುಲ

ಅಮರ ಕೈಲಾಸನಾಥ !

ಅನುಪಮ ಸ್ಥಪತಿಯ ಪ್ರತಿಭೆವಿಲಾಸಕೆ

ತುಟಿ ಹೊರಡಿಸವು ಮಾತ !


ಚರಣಾಂಮದ್ರಿಯ ನಡುಬೆಟ್ಟದ ಒಡಲಲಿ

ಮೂಡಿದೆ ತೇಜೊ ಶಿಲ್ಪ !

ಕನಸಿನಲ್ಲಿಯೂ ಕಲ್ಪಿಸಲಾಗದ

ಗುಹ ದೇವಾಲಯ ಕಲ್ಪ !


ರಾಷ್ಟ್ರಕೂಟರ ಒಂದನೆ ಕೃಷ್ಣನ

ಕಾಲದ ಬೆಡಗಿನ ರಚನೆ !

ಬೆಟ್ಟದ ತುಂಬ ಸಾಲು ಹಚ್ಚಿದೆ

ವರದೇಗುಲದ ಸೇನೆ !


ಮೇಲಿನಿಂದಲೆ ಕೆಳಗೆ ಕೊರೆಯುವ

ತಂತ್ರದ ಜಾಣ ಸ್ಥಪತಿ !

ಗಣಕಯಂತ್ರದ ನವೀನ ಯುಗಕೂ

ನೀಡುತಲಿರುವನು ಸ್ಫೂರ್ತಿ !


ಲಕ್ಷ ಲಕ್ಷ ಶಿಲ್ಪಿಗಳಿಲ್ಲಿ

ದುಡಿದರು ಹದಿನೆಂಟ್ ವರುಷ !

ಯಕ್ಷ ಪ್ರಶ್ನೆಯಾಗಿದೆ ಇಂದಿಗೂ

ವಾಸ್ತು ಜ್ಞಾನದ ಕೋಶ !


ಲಕ್ಷ ಟನ್ನಿನ ಕಲ್ತುಂಡುಗಳು

ಎಲ್ಲಿ ಹೋದವು ಸಾಗಿ‌ !

ವಿಶ್ವ ದಾಖಲೆ ಶಿಲ್ಪವಾಯಿತು

ಹೆಬ್ಬಂಡೆಯು ತಾ ಕರಗಿ !


***


೩೪   ಅಮೃತ ಉತ್ಸವ ಹರುಷ



ಹೆಮ್ಮೆಯ ನಮ್ಮ ಭಾರತ ದೇಶಕೆ

ಅಮೃತ ಉತ್ಸವ ಹರುಷ !

ನಾಡವರೆಲ್ಲರ ನಾಡಿ ಮಿಡಿತಕೆ

ತುಂಬಿದೆ ಭಾವ ಕೋಶ !


ಆಗಸದೆದೆಯಲಿ ಹಬ್ಬಿ ಹರಡಿದೆ

ಕೇಸರಿ ಹಸಿರು ಬಣ್ಣ !

ಅಶೋಕ ಚಕ್ರವ ಹೊಳೆಯಿಸುತಿರುವುದು

ಅಚ್ಚ ಬಳಿಯ ವರ್ಣ !


ಹಲವು ಭಾಷೆ ಹಲವು ವೇಷವ

ಬೆಸೆದಿದೆ ದೇಶ ಪ್ರೇಮ !

ಮನಸಿನ ಬಯಲಲಿ ಗುಡಿಯ ತೋರಣ

ನಾಡ ಪ್ರೀತಿಯ ಧಾಮ !


ಮೂಡಣ ಪಡುವಣ ಸಾಗರದಲೆಗಳು

ತುಂಬಿವೆ ಉಸಿರಿಗೆ ಪ್ರಾಣ !

ಬಡಗಣ ಮೇರು ತೆಂಕಣ 

ಭಾರತ ಮಾತೆಯ ತ್ರಾಣ !


***


೩೫ ಉದ್ದನೆ ಕುತ್ತಿಗೆ


ಚಿರತೆ ಜಿರಾಫೆ ಕರಡಿ ಸಿಂಹ

ಗೆಳೆಯರಿದ್ದರು ಕಾಡಲ್ಲಿ !

ಜೇನನು ಕಂಡು ಆಸೆ ಪಟ್ಟರು

ದೊಡ್ಡ ಗಿಡದ ಪೊಟರೆಯಲಿ !


ಪೊಟರೆಯು ಎತ್ತರೆತ್ತರಕಿದ್ದಿತು

ಉಳಿದ ಪ್ರಾಣಿಗೆ ಸಿಗಲಿಲ್ಲ !

ಅಲ್ಪ ಎತ್ತರವವಿದ್ದ ಜಿರಾಫೆ

ಬಾಯಿ ಹಾಕಿತು ಬಿಡಲಿಲ್ಲ ! 


ಹೂವಿನ ಮಧುರ ಜೇನನು ಸವಿಯುತ

ಚಾಚಿತು ಮೊಗವನು ಆಳಕ್ಕೆ !

ಯಾರಿಗು ಸಿಗದ ಸವಿಸವಿ ರುಚಿಯನು

ಹೊಗಳಿ ಹೇಳಿತು ಬಳಗಕ್ಕೆ !


ನಾಲಗೆ ಚಾಚಿ ಚೀಪಿಯೇ ಚೀಪಿತು

ತನಗೆ ಸಿಕ್ಕಿತು ಎನ್ನುತ್ತ !

ಮೊಗವನು ಹೊರಗೆ ತೆಗೆಯಲು ಬಾರದೆ

ಸಂಕಟ ಪಟ್ಟಿತು ಗೋಳಾಡ್ತ !


ಜೋಡಿ ಗೆಳೆಯರು ಜಿರಾಫೆ ಎಳೆದರು

ನಾಲ್ಕು ಕಾಲನು ಹಿಡಿಯುತ್ತ !

ಮೊಗಬರಲಿಲ್ಲ ಕಾಲ್ಗಳು ಹಿಗ್ಗುತ

ಉದ್ದವಾದವು ಬೆಳೆಯುತ್ತ !


ಹತ್ತಿಪ್ಪತ್ತು ಬಾರಿ ಯತ್ನಿಸಿ

ನಿಲ್ಲಿಸಿ ಬಿಟ್ಟರು ಕೈಸೋತು !

ಕತ್ತಲು ಕವಿಯಲು ಮನೆಸೇರಿದರು

ಗೆಳೆಯ ಜಿರಾಫೆಯ ಗತಿ ಮರೆತು !


ಮಾರನೆ ದಿನಕೆ  ಗಿಡವು ಬೆಳೆಯಿತು

ಹತ್ತಡಿ ಎತ್ತರ ತಂತಾನೆ !

ಜಿರಾಫೆ ಕುತ್ತಿಗೆ ಉದ್ದವಾಯಿತು

ಗಿಡದ ಜೊತೆಯಲಿ‌ ಮುಂಜಾನೆ !


ಏನು ಮಾಡಲು ಆಗದು ಎಂದ

ತನ್ನ ಗೆಳೆಯರ ಬಳಗವನು !

ಹಳಿಯದೆ ಜಿರಾಫೆ ತಾನೆ ಯತ್ನಿಸಿ

ಹೊರಗೆ ಎಳೆಯಿತು ಮೊಗವನ್ನು !


ಕುತ್ತಿಗೆ ಕಾಲು ಉದ್ದಕೆ ಬೆಳೆದ

ಕತೆಯಿದು ಪ್ರಕೃತಿ ಸೋಜಿಗವು !

ಮುಗಿಲೆತ್ತರದ ಗೆಳೆಯ ಜಿರಾಫೆಗೆ

ಯಾರು ಇಲ್ಲ ಸರಿ ಸಮವು !


***


೩೬

ಕಂಡಿಲ್ಲ ನೋಡಿಲ್ಲ


ಭೂಮಿ ತಾಯಿಯು ರಚಿಸಿದ ಕೃತಿಗೆ 

ಸರಿಸಮ ಕಾವ್ಯವ ಕಂಡಿಲ್ಲ !

ಬಿತ್ತುವ ಕೂರಿಗೆ ಬರಹಕೆ ಸರಿಸಮ

ಚಂದದ ಅಕ್ಷರ ನೋಡಿಲ್ಲ !


ಸುಮಧುರ ಜೇನಿನ ಗೂಡಿಗೆ ಸರಿಸಮ

ಸುಂದರ ಶಿಲ್ಪವ ಕಂಡಿಲ್ಲ !

ಜೇಡನ ಬಲೆಯನು ಮೀರಿಸುವಂತಹ

ಅಂದದ ಚಿತ್ರವ ನೋಡಿಲ್ಲ !


ಬೆಡಗಿನ ನವಿಲ ಕುಣಿತಕೆ ಸರಿಸಮ

ಚುಳುಕಿನ ನೃತ್ಯವ ಕಂಡಿಲ್ಲ !

ಅರಳಿದ ಹೂವಿನ ಪರಿಮಳ ಸರಿಸಮ

ಗಂಧ ಸುಗಂಧವ ನೋಡಿಲ್ಲ !


ಗೀಜಗ ಕಟ್ಟಿದ ಗೂಡಿಗೆ ಸರಿಸಮ

ರಾಜರ ಅರಮನೆ ಕಂಡಿಲ್ಲ !

ಕೋಗಿಲೆ ಹಾಡುವ ಪಂಚಮ ಸ್ವರಕೆ

ಸರಿಸಮ ಗಾಯನ ನೋಡಿಲ್ಲ !


ಬಾನಂಗಳದಲಿ ಬೆಳಗುವ ತಾರೆಗೆ

ಸರಿಸಮ ದೀಪ್ತಿಯ ಕಂಡಿಲ್ಲ !

ಸುರಿಯುವ ಮಳೆಗೆ ಸರಿಸಮನಾದ

ಜಲ ಅಮೃತವನು ನೋಡಿಲ್ಲ !


***


೩೭ 


ಪ್ರತಿಮಾ ಯೋಗ


ಸಮರ ಸಮಯದಿ ಸತ್ಯವನರಿತು

ಮಾಡಿದ ಭುಜಬಲಿ ತ್ಯಾಗ !

ಇಂದ್ರಗರಿಯನು ಅಲಂಕರಿಸುತ

ತೋರಿದ ಪ್ರತಿಮಾ ಯೋಗ !


ದೇವದರ್ಶನದಿ ಫಲಿತವಾಯಿತು

ಅರಿಷ್ಟನೇಮಿಯ ತಪಸು !

ಹಿಂಸೆ ತೊರೆದ ದೇವ ದೇವನ

ಜೀವ ಪ್ರೀತಿಯ ಕನಸು !


ಮಾನವನೆದೆಯಲಿ ಬಿತ್ತುತಲಿರುವನು

ಸತ್ಯ ಅಹಿಂಸೆಯ ಬೀಜ !

ಬೆಳಗುಲಿಹುದು ಸಿರಿಮೊಗದಲ್ಲಿ

ಅಮೃತ ದಿವ್ಯ ತೇಜ !


ಲೋಕದ ಜನರಿಗೆ ಪಾಠವ ಕಲಿಪುದು

ಭುಜಬಲಿ ವೀರನ ಸೋಲು !

ಗೆಲುವು ಎಂಬುದು ಗೆಲುವೆ ಅಲ್ಲವು

ಹಿಂಸೆ ಹಿಂಸೆಯ ಮಹಲು !


ಪಸರಿಸಲೆಲ್ಲೆಡೆ ಸತ್ಯ ಅಹಿಂಸೆ

ಬೆಳುಗೊಳ ಜ್ಯೋತಿಯ ಕಿರಣ !

ಮನುಜನ ಅಂತರಂಗದಿ ನೆಲೆಸಲಿ

ಅಚಲ ಶಾಂತಿಯ ಮೌನ !


***


೩೮ ಬೆರಗು ಬೆಡಗಿನ ಗುಂಭ


ವರನಟ ಎಂಬುದು ಅಲ್ಲವೆ ಅಲ್ಲವು

ಕೇವಲ ಬಿರುದಿನ ಹೆಸರು !

ಧಮನಿ ಧಮನಿಯ ಕಣಕಣದಲ್ಲೂ

ತುಂಬಿದೆ ಕನ್ನಡ ಉಸಿರು !


ನುಡಿಮೆಯ ಜಾಣನೊ ನಡತೆಯ ಚರಿತನೊ

ಸಾಲವು ಹೇಳಲು ಶಬ್ದ !

ಅಭಿನಯ ನೋಡುತ ಕಾಲದೇಶಗಳು

ನಿಂತೇಬಿಡುವವು ಸ್ತಬ್ಧ !


ಮಾತನು ಗಿಳಿಗೆ ಹಂಸೆಗೆ ನಡೆಯನು 

ಕಲಿಸಿದ ನಟನೆಯ ಚತುರ !

ನಾದಾಮೋದದ ಕಸ್ತೂರಿ ಕಂಠವು

ಕೋಗಿಲೆಗಿಂತಲೂ ಮಧುರ !


ಜನಪದ ಪುರಾಣ ಇತಿಹಾಸದಲಿ

ಹುದುಗಿದ ಎಲ್ಲ ಪಾತ್ರ !

ಅಂತರಂಗದಿ ಮೂಡಿಸಿಬಿಡುವವು

ಅಳಿಯದ ಅಮೃತ ಚಿತ್ರ !


ಸಂಸ್ಕೃತಿ ಸಮರತಿ ಸನ್ನಡತೆಯಲಿ

ವಿನಯದ ಮಾನ ಸ್ತಂಭ !

ಊಹೆ ತರ್ಕದ ಸೀಮೆಗೆ ನಿಲುಕದ

ಬೆರಗು ಬೆಡಗಿನ ಗುಂಭ !


***

೩೯ ಶಿಲ್ಪ ಸಾಗರ ಸಿಂಧು !


ವಿಜಯ ವಿಠಲ ಮಂದಿರದಲ್ಲಿವೆ

ಸರಿಗಮ ಸ್ವರಗಳ ಕಂಬ !

ಅಡಗಿವೆ ಅದರಲಿ ವಾಸ್ತುಶಿಲ್ಪದ

ಚರಿತೆಯ ನೂರು ಗುಂಭ !


ಐದು ನೂರು ವರುಷಗಳಿಂದ

ಹಾಡುತಲಿರುವವು ಲಾಲಿ !

ಮೊದಲಿಗೆ ಸ್ವರಗುಣ ಗುರುತಿಸಿದವರು

ಪಂಡಿತ ವಸಂತ ಕವಲಿ !


ಕೊಡತಿ ಉಳಿಯ ಮೊನಚಂಚಿನಲಿ

ಬೆಣಚು ಕಲ್ಲಿನ ಮಹಿಮೆ !

ನಾಲ್ಕು ಎಂಟು ಹದಿನಾರ್ಕಂಬವು

ಮೀಟಿವೆ ಅಚ್ಚರಿ ಸೀಮೆ !


ಚರಿತೆಯಲೆಲ್ಲಿಯು ದಾಖಲೆಯಿಲ್ಲವು

ಸರಿಗಮ ಉಲಿಯುವ ಬಗೆಗೆ !

ಏನೇ ಇರಲಿ ಮೆಚ್ಚಲೆಬೇಕು

ಶಿಲ್ಪಿಯ ಅದ್ಭುತ ಕಲೆಗೆ !


ವಿಜಯನಗರದ ಅರಸರ ಕೊಡುಗೆ

ಜಗದಚ್ಚರಿಯಲಿ ಒಂದು !

ಹಂಪೆಯ ಪರಿಸರ ಕನ್ನಡ ನಾಡಿನ

ಶಿಲ್ಪ ಸಾಗರ ಸಿಂಧು !